ಭಟ್ಕಳ (ಉ.ಕ): ಎಟಿಎಂನಲಿ ಸಿಕ್ಕ ಹಣವನ್ನು ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕನಿಗೆ ಅಡಿಷನಲ್ ಎಸ್ಪಿ ಬದ್ರಿನಾಥ್ ನಗರ ಠಾಣೆಯಲ್ಲಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಕಳೆದ ಆಗಸ್ಟ್ 31 ರಂದು ತಾಲೂಕಿನ ಬಂದರು ರಸ್ತೆಯಲ್ಲಿನ ಎಟಿಎಂ (ಸಿಡಿಎಂ)ನಲ್ಲಿ ಬಿಲಾಲ್ ತನ್ವಿರ್ ಎಂಬಾತ ತನ್ನ ತಂದೆಯ ಖಾತೆಗೆ 1,74,000 ರೂ. ಜಮಾ ಮಾಡಿ ತೆರಳಿದ್ದರು. ಆದರೆ ಎಟಿಎಂನಲ್ಲಿ ತಾಂತ್ರಿಕ ತೊಡಕಿನಿಂದ ಹಣ ವಾಪಸ್ ಬಂದಿತ್ತು. ಇದು ತನ್ವಿರ್ ಅರಿವಿಗೆ ಬಂದಿರಲಿಲ್ಲ.
ಬಳಿಕ ದಿನಕರ ಗೊಂಡ ಎಂಬಾತ ಇದೇ ಎಟಿಎಂಗೆ ತೆರಳಿದ್ದಾನೆ. ಆಗ ಯಂತ್ರದಲ್ಲಿದ್ದ ಹಣವನ್ನು ನಗರ ಠಾಣೆ ಪೊಲೀಸರಿಗೆ ತಂದು ನೀಡಿದ್ದಾರೆ. ತಕ್ಷಣ ಎಟಿಎಂ ಬಳಿ ತೆರಳಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ.
ಆಗ ಹಣವು ಬಿಲಾಲ್ ತನ್ವಿರ್ ತಂದೆಯ ಖಾತೆಗೆ ಜಮಾ ಆಗದಿರುವುದು ತಿಳಿದುಬಂದಿದೆ. ಈ ಬಗ್ಗೆ ಖಾತ್ರಿಪಡಿಸಿಕೊಂಡು 1,74,000 ರೂ.ಗಳನ್ನು ಬಿಲಾಲ್ಗೆ ಹಸ್ತಾಂತರಿಸಿದ್ದಾರೆ.
ಯುವಕ ದಿನಕರ್ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಶನಿವಾರ ಭಟ್ಕಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯುವಕನನ್ನು ನಗರ ಠಾಣೆಗೆ ಕರೆಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಇದನ್ನೂ ಓದಿ: ಸಂಕುಚಿತ ಭಾವನೆಯುಳ್ಳವರಿಗೆ ಬೆಳಗಾವಿಯಲ್ಲಿ ಜಾಗವಿಲ್ಲ: ಮಹಾ ನಾಯಕರಿಗೆ ಸಿಎಂ ಖಡಕ್ ಸಂದೇಶ