ಕಾರವಾರ: ನಾಲ್ಕು ತಿಂಗಳ ಹಿಂದೆ ಪರಿಚಯವಾದ ವ್ಯಕ್ತಿಯೊಬ್ಬನ ಮಾತಿಗೆ ಮರುಳಾಗಿ ಸುತ್ತಾಡಲು ಬಂದಿದ್ದ ಮಹಿಳೆಯೊಬ್ಬಳು ಚಿನ್ನಾಭರಣ, ಮೊಬೈಲ್, ನಗದು ಸೇರಿ ಸುಮಾರು 2 ಲಕ್ಷ ಕಳೆದುಕೊಂಡಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ.
ಬೆಳಗಾವಿಯ ಕರೋಶಿ ಗ್ರಾಮದ ಮಾಲವ್ವ ಗುರಪ್ಪ ನಡುವಿನಕೇರಿ (36) ಎಂಬ ಮಹಿಳೆಯೇ ವಂಚನೆಗೊಳಗಾಗಿದ್ದಾಳೆ. ಕಳೆದ ನಾಲ್ಕು ತಿಂಗಳ ಹಿಂದೆ ಪರಿಚಯವಾದ ಸುರೇಶ ಎಂಬಾತ ಮದುವೆಯಾಗುವುದಾಗಿ ನಂಬಿಸಿದ್ದ. ಅವನ ಮಾತಿಗೆ ಮರುಳಾಗಿ ಪೂರ್ವಾಪರ ವಿಚಾರ ಮಾಡದೇ ಮಹಿಳೆ ಬುಧವಾರ ರಾತ್ರಿ ಗೋಕರ್ಣಕ್ಕೆ ಬಂದು ಖಾಸಗಿ ವಸತಿ ಗೃಹದಲ್ಲಿ ಉಳಿದಿದ್ದರು.
ಆದರೆ, ಗುರುವಾರ ಮಹಿಳೆಗೆ ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಸಿದ್ದು, ಮಹಿಳೆ ಮಲಗಿದ ಸಮಯ ನೋಡಿ ಅವಳ ಹತ್ತಿರ ಇದ್ದ ಸುಮಾರು 1 ಲಕ್ಷ 52 ಸಾವಿರ ರೂಪಾಯಿ ಮೌಲ್ಯದ 38 ಗ್ರಾಂ ಬಂಗಾರ, 12 ಸಾವಿರ ರೂಪಾಯಿ ಮೌಲ್ಯದ 2 ಮೊಬೈಲ್ ಹಾಗೂ 15 ಸಾವಿರ ನಗದು ಕದ್ದು ಆರೋಪಿ ರೂಮಿಗೆ ಹೊರಗಿನಿಂದ ಬಾಗಿಲು ಹಾಕಿ ಓಡಿ ಹೋಗಿದ್ದಾನೆ. ಆರೋಪಿಯು ಮೀರಜ್ ಅಥವಾ ಪುಣೆಯ ಮೂಲದವನು ಎನ್ನಲಾಗಿದೆ. ಇದನ್ನು ಬಿಟ್ಟರೇ ಬೇರೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.
ಮಹಿಳೆ ಮಲಗಿದ ಸಮಯ ನೋಡಿ ಅವಳ ಹತ್ತಿರ ಇರುವ ಎಲ್ಲದನ್ನೂ ದೋಚಿ ಪರಾರಿಯಾಗಿದ್ದಾನೆ. ಸುಮಾರು 8 ಗಂಟೆಯಿಂದ ರಾತ್ರಿ 1 ಗಂಟೆಯ ಅವಧಿಯಲ್ಲಿ ಈ ಕೃತ್ಯ ನಡೆದಿರಬೇಕೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯ ವಿಳಾಸ, ಮೊಬೈಲ್ ನಂಬರ್ ಯಾವುದನ್ನೂ ತಿಳಿಯದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ವಸತಿ ಗೃಹದಲ್ಲಿಯೂ ತಪ್ಪು ವಿಳಾಸ ನೀಡಿದ್ದಾನೆ ಎನ್ನಲಾಗಿದೆ. ಪಿ.ಎಸ್.ಐ ಸುಧಾ ಅಘನಾಶಿನಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕಿತ್ತೂರು ಕರ್ನಾಟಕಕ್ಕೆ ಉತ್ತರಕನ್ನಡ ಸೇರ್ಪಡೆ: ಸ್ಥಳೀಯರ ಆತಂಕವೇನು?