ಕಾರವಾರ: ದೇಶದ ಕರಾವಳಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ನೌಕಾಪಡೆಯ ಶಕ್ತಿ ಹಾಗೂ ಸಾಮರ್ಥ್ಯ ಹೆಚ್ಚಿಸಲಾಗಿದೆ. ಆದರೆ, ಇದು ಯಾರ ವಿರುದ್ಧ ಹೋರಾಟಕ್ಕಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ತಾಲೂಕಿನ ಅರಗಾದಲ್ಲಿರುವ ಐಎನ್‌ಎಸ್ ಕದಂಬ ನೌಕಾನೆಲೆಗೆ ಎರಡು ದಿನ ಭೇಟಿಗೆ ಆಗಮಿಸಿದ ಅವರು, ಸ್ವದೇಶಿ ನಿರ್ಮಿತ ಐಎನ್‌ಎಸ್ ಖಂಡೇರಿ ಜಲಾಂತರ್ಗಾಮಿಯಲ್ಲಿ ಸಮುದ್ರಯಾನ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಭಾರತೀಯ ನೌಕಾಪಡೆಗಳ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವುದು ಯಾರ ವಿರುದ್ಧದ ಹೋರಾಟಕ್ಕಲ್ಲ. ರಾಷ್ಟ್ರದ ಹಿತಾಸಕ್ತಿಗಾಗಿ ಭಾರತೀಯ ನೌಕಾಪಡೆ ಸೇರಿದಂತೆ ರಕ್ಷಣಾ ಪಡೆಗಳ ಬಲ ವೃದ್ಧಿಸಲಾಗುತ್ತಿದೆ. ಇದರ ಮೂಲಕ ಭಾರತೀಯ ಕರಾವಳಿ ನಿವಾಸಿಗಳಿಗೆ ಶಾಂತಿ ಒದಗಿಸಲು ಮತ್ತು ಸೌಹಾರ್ದತೆಗಾಗಿ ಎಂದು ಹೇಳಿದರು.
ಈ ವರ್ಷ ಆಜಾದಿ ಕಾ ಅಮೃತ್ ಮಹೋತ್ಸವಕ್ಕಾಗಿ ಐಎನ್‌ಎಸ್ ವಿಕ್ರಾಂತ್ ಸಿದ್ಧಗೊಳ್ಳುತ್ತಿದೆ. ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ ಎರಡೂ ಸೇರಿ ಭಾರತೀಯ ಸಾಗರ ರಕ್ಷಣೆಗೆ ಹೆಚ್ಚಿನ ಶಕ್ತಿ ನೀಡುತ್ತಿದೆ ಎಂಬ ವಿಶ್ವಾಸವಿದೆ. ಭಾರತೀಯ ನೌಕಾಪಡೆಯನ್ನು ಈಗ ಜಗತ್ತಿನ ಪ್ರಮುಖ ನೌಕಾಪಡೆಗಳ ಸಾಲಿನಲ್ಲಿ ನೋಡಲಾಗುತ್ತಿದೆ ಎಂದರು.
ವಿಶ್ವದ ದೊಡ್ಡ ದೊಡ್ಡ ಪಡೆಗಳು ಕೂಡ ಈಗ ಭಾರತದ ಸಹಯೋಗಕ್ಕೆ ಕೈಚಾಚುತ್ತಿವೆ. ಹಿಂದೂ ಮಹಾ ಸಾಗರದಲ್ಲಿರುವ ರಾಷ್ಟ್ರಗಳ ನಡುವೆ ಶಾಂತಿ ಸಮೃದ್ಧಿಯನ್ನು ಸ್ಥಾಪಿಸುವುದಕ್ಕಾಗಿ ಭಾರತೀಯ ರಕ್ಷಣಾ ಪಡೆಗಳ ಶಕ್ತಿ ವೃದ್ಧಿಸಲಾಗುತ್ತಿದೆ ಹೊರತು ಯಾವುದೇ ದೇಶವನ್ನು ಕೆರಳಿಸುವುದಕ್ಕಾಗಲಿ ಅಥವಾ ಅವರ ವಿರುದ್ಧದ ಹೋರಾಟಕ್ಕಲ್ಲ ಎಂದು ಸ್ಪಷ್ಟಪಡಿಸಿದರು.
39 ಸಬ್ ಮರಿನ್ಗಳ ನಿರ್ಮಾಣ: ಭಾರತೀಯ ನೌಕಾಪಡೆ ಲೋಕಾರ್ಪಣೆಗೊಳಿಸಿರುವ ವಿವಿಧ ದೇಶೀಯ ನೌಕೆಗಳು ಹಾಗೂ ಶಸ್ತ್ರಾಸ್ತ್ರಗಳು ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಶಕ್ತಿ ನೀಡಿದೆ. ಐಎನ್‌ಎಸ್ ಖಂಡೇರಿ ಮೆಕ್ ಇನ್ ಇಂಡಿಯಾ ಅಡಿ ನಿರ್ಮಿಸಲಾದ ಅತ್ಯಾಧುನಿಕ ಸಬ್ ಮರಿನ್ಗಳಲ್ಲೊಂದಾಗಿದೆ. ಈಗಾಗಲೇ ಬೇಡಿಕೆ ಸಲ್ಲಿಸಲಾಗಿರುವ 41 ಸಬ್ ಮರಿನ್ಗಳಲ್ಲಿ 39 ಸಬ್ ಮರಿನ್ಗಳು ಭಾರತೀಯ ಶಿಪ್ಯಾರ್ಡ್ನಲ್ಲಿ ತಯಾರಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ರಾಜನಾಥ್ ಹೇಳಿದರು.
ಸಂಪೂರ್ಣ ಭಾರತೀಯ ನಿರ್ಮಿತ ಅತ್ಯಾಧುನಿಕ ಏರ್ಕ್ರಾಪ್ಟ್ ಕ್ಯಾರಿಯರ್ ಐಎನ್‌ಎಸ್ ವಿಕ್ರಾಂತ್ ನೌಕಾಪಡೆಗೆ ಸದ್ಯದಲ್ಲಿಯೇ ಸೇರ್ಪಡೆಗೊಳ್ಳಲಿದೆ. ನೌಕಾದಳದ ಹೆಸರನ್ನು ವಿಶ್ವದ ಪ್ರಮುಖ ನೌಕಾಪಡೆಯೊಂದಿಗೆ ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ನೌಕಾಪಡೆಯು ವಿಶ್ವದಲ್ಲಿ ಅತ್ಯುತ್ತಮವಾದ ಗೌರವ ಹೊಂದಿದ್ದು, ಅಮೆರಿಕ ಸೇರಿದಂತೆ ಪ್ರಮುಖ ದೇಶಗಳ ನೌಕಾಪಡೆಯು ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ ಎಂದರು.
ನೌಕಾಪಡೆಯ ಮುಖ್ಯಸ್ಥ ಆರ್.ಹರಿಕುಮಾರ್, ಪಶ್ಚಿಮ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜೇಂದ್ರ ಬಹಾದೂರ್ ಸಿಂಗ್ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಇದ್ದರು.