ಕಾರವಾರ: ಗಣೇಶ ಚತುರ್ಥಿ ವೇಳೆ ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಆದ್ರೆ, ಈಗಾಗಲೇ ಚೌತಿ ಹಬ್ಬ ಮುಗಿದು ಐದಾರು ತಿಂಗಳು ಕಳೆದಿವೆ. ಮತ್ತೆ ಹಬ್ಬ ಬರಬೇಕು ಅಂದ್ರೆ ಸಾಕಷ್ಟು ತಿಂಗಳು ಕಳೆಯಬೇಕು. ಆದರೂ ಕರಾವಳಿ ನಗರಿ ಕಾರವಾರದ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಘ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಣಪತಿ ಹುಟ್ಟಿದ ದಿನ ಎಂದೇ ಹೇಳಲಾಗುವ ಮಾಘ ಚೌತಿಯಂದು ಗಣೇಶ ಚತುರ್ಥಿ ಮಾದರಿಯಲ್ಲೇ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಕಾರವಾರ ತಾಲೂಕಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಾಘ ಚೌತಿಯಂದು ಪ್ರತಿಷ್ಠಾಪಿಸುವ ಮೂರ್ತಿಯನ್ನು ಹರಕೆ ಗಣಪತಿ ಎಂದೇ ಹೇಳಲಾಗುತ್ತದೆ.
"ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತುಕೊಂಡವರು ಹಾಗೂ ಗಣೇಶ ಚತುರ್ಥಿಯ ಸಮಯದಲ್ಲಿ ನಾನಾ ಕಾರಣಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗದೇ ಇರುವವರು ಮಾಘ ಚೌತಿಯಂದು ಒಂದು ದಿನದ ಮಟ್ಟಿಗೆ ಗಣಪನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ. ಗಣೇಶನ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ಒಂದೇ ದಿನ ಇರಿಸಿ, ರಾತ್ರಿ ವೇಳೆಗೆ ನಿಮಜ್ಜನೆ ಮಾಡಲಾಗುತ್ತದೆ. ಈ ಮೂಲಕ ಮಾಘ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ" ಎನ್ನುತ್ತಾರೆ ಅರ್ಚಕ ಅನೂಪ್ ನೇತಲ್ಕರ್.
![magha chaturthi celebration](https://etvbharatimages.akamaized.net/etvbharat/prod-images/kn-kwr-02-costal-special-maagha-chaturti-rtu-pkg-ka10044_26012023055746_2601f_1674692866_665.jpg)
ಇದನ್ನೂ ಓದಿ: ಕಡಲನಗರಿಯಲ್ಲಿ 'ಮಾಘ' ಚೌತಿ .. ಗಣಪನ ಮೂರ್ತಿಯೊಂದಿಗೆ ಜನರ ಸಂಭ್ರಮ!
ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿದೆ. ಕಾರವಾರ ಗೋವಾ ಗಡಿಯಾಗಿದ್ದು, ಜೊತೆಗೆ ಮಹಾರಾಷ್ಟ್ರ ಸಂಸ್ಕೃತಿಯೂ ಇರುವ ಕಾರಣ ಮಾಘ ಚೌತಿಯನ್ನು ಕಾರವಾರದಲ್ಲೂ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಬೇರೆ ಯಾವ ತಾಲೂಕಿನಲ್ಲೂ ಅಷ್ಟಾಗಿ ಈ ಹಬ್ಬವನ್ನು ಆಚರಿಸುವುದಿಲ್ಲ.
ಇದನ್ನೂ ಓದಿ: ಮಾಘ ಚೌತಿ ಹಬ್ಬದ ಹಿನ್ನಲೆ, ಕಾರವಾರದಲ್ಲಿ ವಿಶೇಷ ಗಣೇಶ ಮೂರ್ತಿ ಪೂಜೆ...!
"ಹಲವರು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಮಾಘ ಚೌತಿಯಂದು ಗಣಪನ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಇಷ್ಟಾರ್ಥ ಸಿದ್ಧಿಸಿದ ನಂತರ ಮಾಘ ಚೌತಿಯಂದು ಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಲ್ಲದೇ, ಕೆಲವರು ಮಾಘ ಚತುರ್ಥಿಯಂದು ಸಾರ್ವಜನಿಕ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಿ, ಸಂಜೆಯ ವೇಳೆಗೆ ನಿಮಜ್ಜನೆ ಮಾಡುತ್ತಾರೆ" ಎನ್ನುತ್ತಾರೆ ಗಣಪತಿ ಪ್ರತಿಷ್ಠಾಪಿಸಿದ ಮನೆ ಯಜಮಾನಿ ದಿವ್ಯಾ ರೇವಣಕರ್.
ಇದನ್ನೂ ಓದಿ: ಮಾಘ ಚೌತಿ ವಿಶೇಷ... ಕಾರವಾರದಲ್ಲಿ ಮನೆ ಮಾಡಿದ ಗಣೇಶ ಚತುರ್ಥಿ ಸಂಭ್ರಮ!