ಕಾರವಾರ: ಕರಾವಳಿಯಲ್ಲಿ ಮೀನುಗಾರಿಕೆ ಅವಧಿ ಆರಂಭವಾಗಿ ಕೇವಲ ನಾಲ್ಕು ತಿಂಗಳು ಮಾತ್ರ ಕಳೆದಿದೆ. ತರಹೇವಾರಿ ಮೀನುಗಳನ್ನು ಹೊತ್ತು ತರಬೇಕಿದ್ದ ಬೋಟುಗಳು ಮತ್ಸ್ಯ ಬೇಟೆ ಅವಧಿಯಲ್ಲೇ ಬಂದರಿನಲ್ಲೇ ಲಂಗರು ಹಾಕತೊಡಗಿದ್ದು, ಮೀನುಗಾರರೂ ಕೆಲಸವಿಲ್ಲದೇ ಬೋಟು, ಬಲೆಗಳ ರಿಪೇರಿಯಲ್ಲಿ ತೊಡಗಿಕೊಳ್ಳುವಂತಾಗಿದೆ.
ಹೌದು. ಕರಾವಳಿಯಲ್ಲಿ ಮೀನುಗಾರರು ಸರ್ಕಾರದ ಆದೇಶದಂತೆ ಆಗಸ್ಟ್ 1 ರಿಂದ ಮೀನುಗಾರಿಕೆ ಆರಂಭಿಸಿದ್ದು, ಆರಂಭದಲ್ಲಿ ಉತ್ತಮ ಮೀನುಗಾರಿಕೆಯೂ ನಡೆದಿತ್ತು. ಆದರೆ ಇದೀಗ ಕಳೆದ 15 ದಿನಗಳಿಂದ ಆಳಸಮುದ್ರಕ್ಕೆ ತೆರಳಿದರೂ ಸಹ ಬೋಟುಗಳಿಗೆ ಮೀನುಗಳೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಳಸಮುದ್ರಕ್ಕೆ ಒಂದು ಬಾರಿ ಮೀನುಗಾರಿಕೆಗೆ ತೆರಳಲು ಒಂದು ಬೋಟಿಗೆ ಡೀಸೆಲ್, ಕಾರ್ಮಿಕರು ಸೇರಿದಂತೆ ಸುಮಾರು 40 ರಿಂದ 50 ಸಾವಿರ ರೂಪಾಯಿ ಖರ್ಚಾಗುತ್ತದೆ.
ಆದರೆ, ಸಮುದ್ರದಲ್ಲಿ ಕೇವಲ 15 ರಿಂದ 20 ಸಾವಿರ ರೂಪಾಯಿ ಆಗುವಷ್ಟು ಮಾತ್ರ ಮೀನುಗಳು ಸಿಗುತ್ತಿದ್ದು ಇದರಿಂದ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ. ಮೀನುಗಾರಿಕೆಗೆ ಮಾಡಿದ ಖರ್ಚು ಸಹ ಪೂರೈಸದ ಮಟ್ಟಿಗೆ ಮೀನುಗಾರಿಕೆ ನಷ್ಟ ಅನುಭವಿಸುತ್ತಿದ್ದು, ಹೀಗಾಗಿ ಮೀನುಗಾರರು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿ ನಿಲ್ಲುವಂತಾಗಿದೆ ಎನ್ನುತ್ತಾರೆ ಮೀನುಗಾರರಾದ ಪ್ರಶಾಂತ ಹರಿಕಂತ್ರ.
ಇನ್ನು ಪ್ರತಿವರ್ಷ ಈ ಅವಧಿಯಲ್ಲಿ ಬಂಗುಡೆ, ಸೀಗಡಿ, ಲೆಪ್ಪೆ, ಪಾಪ್ಲೆಟ್ ಸೇರಿದಂತೆ ಸಾಕಷ್ಟು ಮೀನುಗಳು ಸಿಗುತ್ತಿದ್ದವು. ಇದರಿಂದ ಸಾಲ ಮಾಡಿ ಮೀನುಗಾರಿಕೆ ಆರಂಭಿಸಿದ್ದ ಮೀನುಗಾರರು ಉತ್ತಮ ಮೀನುಗಾರಿಕೆ ನಡೆಸುವ ಮೂಲಕ ಹೆಚ್ಚಿನ ಆದಾಯ ಗಳಿಸಿ ಸಾಲ ತೀರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಮೀನುಗಾರಿಕೆ ಆರಂಭವಾದ ನಾಲ್ಕೇ ತಿಂಗಳಲ್ಲೇ ಮತ್ಸ್ಯಕ್ಷಾಮ ಪರಿಸ್ಥಿತಿ ನಿರ್ಮಾಣವಾಗಿದ್ದು ಬೋಟ್‍ಗೆ ವ್ಯಯಿಸುವ ಡೀಸೆಲ್ ವೆಚ್ಛವೂ ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಮೀನುಗಾರರೂ ಸಹ ಮೀನುಗಾರಿಕೆ ಸ್ಥಗಿತಗೊಳಿಸಿ ಕೂಲಿ ಕೆಲಸಕ್ಕೆ ತೆರಳಬೇಕಾದ ಸ್ಥಿತಿ ಎದುರಾಗಿದೆ ಎಂದು ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅವಧಿ ಪೂರ್ವ ಮತ್ಸ್ಯಕ್ಷಾಮದಿಂದಾಗಿ ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದ್ದು, ಸರ್ಕಾರ ಬೆಳೆ ಹಾನಿಗೆ ರೈತರಿಗೆ ನೀಡುವಂತೆ ಮೀನುಗಾರರಿಗೂ ಪರಿಹಾರ ಒದಗಿಸಬೇಕು. ಮೀನುಗಾರರಿಗೆ ಸಿಆರ್ಜೆಡ್ ಕಾರಣ ನೀಡಿ ಸಾಲ ನೀಡುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಮೀನುಗಾರ ಮುಖಂಡರಾದ ರಾಜು ತಾಂಡೇಲ್ ಆಗ್ರಹಿಸಿದ್ದಾರೆ.
ಒಟ್ಟಾರೇ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಮೀನುಗಾರರಿಗೆ ಇದೀಗ ಮತ್ಸ್ಯಕ್ಷಾಮದಿಂದಾಗಿ ಸಂಕಷ್ಟ ಎದುರಿಸುವಂತಾಗಿದ್ದು, ಸರ್ಕಾರ ಈ ಬಗ್ಗೆ ಎಚ್ಚೆತ್ತು ಮೀನುಗಾರರ ನೆರವಿಗೆ ಮುಂದಾಗಬೇಕಿದೆ.
ಇದನ್ನೂ ಓದಿ: ಬೋಟ್ ಇಂಜಿನ್ ಹಾಳಾಗಿ ಅಪಾಯದಲ್ಲಿದ್ದ 26 ಮೀನುಗಾರರ ರಕ್ಷಣೆ: ವಿಡಿಯೋ