ಕಾರವಾರ : ಅಂಕೋಲಾದಿಂದ ಯಲ್ಲಾಪೂರ-ಹುಬ್ಬಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕಳೆದ ಹತ್ತು ದಿನಗಳಿಂದ ಸಂಚಾರಕ್ಕೆ ಅವಕಾಶ ಸಿಗದ ಹಿನ್ನೆಲೆ ಲಾರಿ ಚಾಲಕರ ಪರಿಸ್ಥಿತಿ ಹದಗೆಟ್ಟಿದೆ.
ಜಿಲ್ಲೆಯಲ್ಲಿ ಜುಲೈ 23ರಂದು ಸುರಿದ ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸರಕು ಸಾಗಣೆಯ ಲಾರಿಗಳನ್ನ ಬಾಳೆಗುಳಿ ಬಳಿಯಲ್ಲಿಯೇ ತಡೆ ಹಿಡಿಯಲಾಗಿದೆ. ಇದೀಗ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಹತ್ತು ದಿನ ಕಳೆದರೂ ಸಹ ಸರಕು ಸಾಗಾಟಕ್ಕೆ ಅವಕಾಶ ನೀಡಿಲ್ಲ. ಇದರಿಂದಾಗಿ ಲಾರಿ ಚಾಲಕರು ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ.
ಇಷ್ಟು ದಿನ ಇದ್ದ ದಿನಸಿ ಸಾಮಗ್ರಿ ಹಾಗೂ ಕೈಯಲ್ಲಿದ್ದ ಹಣ ಖಾಲಿಯಾಗಿದ್ದು, ತುತ್ತು ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಪೊಲೀಸರನ್ನ ಕೇಳಿದ್ರೆ ನಾಳೆ ಬಿಡ್ತಾರೆ, ನಾಡಿದ್ದು ಬಿಡ್ತಾರೆ ಅಂತಾ ಹೇಳುತ್ತಿದ್ದಾರಂತೆ. ಯಾವಾಗ ಸಂಚಾರಕ್ಕೆ ಅವಕಾಶ ನೀಡುತ್ತಾರೆ ಅನ್ನೋದೇ ತಿಳಿಯದೇ ಲಾರಿ ಚಾಲಕರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಇನ್ನು, ಬಾಳೆಗುಳಿಯಿಂದ ಹೆದ್ದಾರಿಯ ಉದ್ದಕ್ಕೂ ಸುಮಾರು ನಾಲ್ಕೈದು ಕಿಲೋಮೀಟರ್‌ಗಳವರೆಗೆ ಸಾವಿರಾರು ಸರಕು ಸಾಗಾಟ ಲಾರಿಗಳು ಸಾಲುಗಟ್ಟಿ ನಿಂತಿವೆ. ಅಲ್ಲದೇ ಇಲ್ಲಿನ ಟೋಲ್‌ಗೇಟ್, ಅಂಕೋಲಾ, ಕುಮಟಾದಲ್ಲೂ ಸಹ ಟ್ರಕ್‌ಗಳು ನಿಂತುಕೊಂಡಿದ್ದು, ಮುಂದೆ ಸಂಚಾರ ಯಾವಾಗ ಅನ್ನೋದೇ ತಿಳಿಯದೇ ಚಾಲಕರುಗಳು ದಿನದೂಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸರಕು ಸಾಗಾಟ ಲಾರಿಗಳು ಸಂಚರಿಸುವ ಪ್ರಮುಖ ಮಾರ್ಗವೇ ರಾಷ್ಟ್ರೀಯ ಹೆದ್ದಾರಿ 63 ಆಗಿದ್ದು, ಇತ್ತ ಕುಮಟಾ-ಶಿರಸಿ ರಾಜ್ಯ ಹೆದ್ದಾರಿ 69ರಲ್ಲಿ ಅಗಲೀಕರಣ ಕಾರ್ಯ ನಡೆಯುತ್ತಿರುವುದರಿಂದ ಆ ಮಾರ್ಗದಲ್ಲೂ ಲಾರಿಗಳ ಸಂಚಾರಕ್ಕೆ ಉತ್ತಮವಾಗಿಲ್ಲ.
ಅಲ್ಲದೇ ಕಾರವಾರ, ಜೋಯಿಡಾ-ಬೆಳಗಾವಿ ಹೆದ್ದಾರಿಯ ಅಣಶಿ ಘಟ್ಟದಲ್ಲೂ ಭೂಕುಸಿತ ಉಂಟಾಗಿರುವುದಿಂದ ಸಂಚಾರಕ್ಕೆ ಪರ್ಯಾಯ ಮಾರ್ಗವಿಲ್ಲದೇ ಸರಕು ಸಾಗಾಟಕ್ಕೆ ಅಡ್ಡಿಯುಂಟಾದಂತಾಗಿದೆ. ಸಾಕಷ್ಟು ದಿನ ಸರಕು ತುಂಬಿದ ಲಾರಿಗಳು ಒಂದೇ ಸ್ಥಳದಲ್ಲಿ ನಿಲ್ಲುವುದರಿಂದ ವಾಹನಗಳಿಗೂ ಸಮಸ್ಯೆ ಉಂಟಾಗಲಿದೆ. ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕಾದರೂ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಲ್ಲಿ ಅನುಕೂಲವಾಗಲಿದೆ ಅನ್ನೋದು ಚಾಲಕರ ಅಭಿಪ್ರಾಯ.
ಉತ್ತರಕನ್ನಡದಲ್ಲಿ ಅಬ್ಬರಿಸಿದ ವರುಣನ ಅವಾಂತರದಿಂದಾಗಿ ಲಾರಿ ಚಾಲಕರುಗಳು ರಸ್ತೆಯಬದಿಯಲ್ಲಿ ಜೀವನ ನಡೆಸುವಂತಾಗಿರುವುದು ನಿಜಕ್ಕೂ ದುರಂತ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಹೆದ್ದಾರಿಯ ಒಂದು ಬದಿಯಲ್ಲಾದರೂ ಸಂಚಾರಕ್ಕೆ ಅವಕಾಶ ಒದಗಿಸಿಕೊಡುವ ಪ್ರಯತ್ನ ಮಾಡಬೇಕಾಗಿದೆ.