ಕಾರವಾರ(ಉತ್ತರ ಕನ್ನಡ): ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಮತ್ತೆ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದೆ. ದೂರುಗಳನ್ನು ಆಧರಿಸಿ ಲಂಚ ಕೇಳುವ ಅಧಿಕಾರಿಗಳನ್ನು ಬಲೆಗೆ ಬೀಳಿಸುತ್ತಿದೆ. ಲೋಕಾಯುಕ್ತ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗೆ ಜಾಗ ಪೋಡಿ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, 15 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಸರ್ವೇ ಅಧಿಕಾರಿಯೋರ್ವರನ್ನು ವಶಕ್ಕೆ ಪಡೆದಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ಪುಟ್ಟುಸ್ವಾಮಿ ಸಿಕ್ಕಿಬಿದ್ದಿರುವ ಆರೋಪಿ.
ಅಂಕೋಲಾದ ರಮೇಶ್ ಎಂಬುವರಿಂದ ಜಮೀನಿನ ಜಾಗವನ್ನು ಪೋಡಿ ಮಾಡಿಕೊಡಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಈ ಹಿಂದೆ 5 ಸಾವಿರ ಪಡೆದಿದ್ದರು ಎನ್ನಲಾಗ್ತಿದೆ. ಶುಕ್ರವಾರ ಕೂಡ ಉಳಿದ ಹಣದ ಪೈಕಿ 15 ಸಾವಿರ ಹಣವನ್ನು ಅಂಕೋಲಾ ಬಳಿಯ ಖಾಸಗಿ ಹೋಟೆಲ್ವೊಂದರಲ್ಲಿ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಡಿ.ವೈ.ಎಸ್.ಪಿ ರಾಜು ನೇತೃತ್ವದ ತಂಡ ಆರೋಪಿಯನ್ನು ನಗದು ಸಮೇತ ವಶಕ್ಕೆ ಪಡೆದಿದೆ. ಬಳಿಕ ಹೋಟೆಲ್ನಿಂದ ಅವರನ್ನು ತಹಶೀಲ್ದಾರ್ ಕಾರ್ಯಾಲಯದ ಮೇಲ್ಮಹಡಿಯಲ್ಲಿರುವ ಭೂದಾಖಲೆಗಳ ಕಚೇರಿಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪುಟ್ಟುಸ್ವಾಮಿ ಪದೋನ್ನತಿ ಹೊಂದಿ ಅಂಕೋಲಾಕ್ಕೆ ವರ್ಗಾವಣೆ ಗೊಂಡಿದ್ದರು.
ದಾವಣಗೆರೆ ಜಿಲ್ಲೆಯಲ್ಲಿ ಫೈರ್ ಆಫೀಸರ್ ಲೋಕಾಯುಕ್ತ ಬಲೆಗೆ : ಕಳೆದ 4 ದಿನಗಳ ಹಿಂದೆಯಷ್ಟೇ ಫೈರ್ ಆಫೀಸರ್ ಒಬ್ಬರು ಲಂಚ ಪಡೆಯುವಾಗ ದಾವಣಗೆರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಹರಿಹರ ತಾಲೂಕಿನ ಸುಹಾಸ್ ಹಣ ಪಡೆಯುವಾಗ ಟ್ರ್ಯಾಪ್ ಮಾಡಿದ ತನಿಖಾಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಫೈರ್ ಸೇಫ್ಟಿ ಎನ್‌ಒಸಿಗೆ ಆರೋಪಿತ ಅಧಿಕಾರಿ 8,000 ಸಾವಿರ ರೂ. ಕೇಳಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತು.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಫೈರ್ ಆಫೀಸರ್
ಪಟ್ಟಣ ಪಂಚಾಯತ್ ಸದಸ್ಯನ ಸದಸ್ಯತ್ವ ರದ್ದು: ನಿನ್ನೆ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಅವರು ಜೋಗ-ಕಾರ್ಗಲ್ ಪಟ್ಟಣ ಪಂಚಾಯತಿ ಸದಸ್ಯ ಹರೀಶ್ ಗೌಡ ಎಂಬಾತನ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೋಳಿ ಅಂಗಡಿಯ ಪರವಾನಗಿ ಮಾಡಿಸಿಕೊಡಲು ವ್ಯಕ್ತಿಯೊಬ್ಬರಿಂದ ಇವರು 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಲಂಚ ಸ್ವೀಕಾರ ಮಾಡಿದ ಬಳಿಕ ನಾನು ಟ್ರ್ಯಾಪ್ ಆಗಿದ್ದೇನೆ ಎಂದು ತಿಳಿದು, ಹಣವನ್ನು ಸುಡಲು ಯತ್ನಿಸಿದ್ದರು. ಘಟನೆಯಿಂದ ಹಲವು ನೋಟುಗಳು ಸುಟ್ಟು ಹೋಗಿದ್ದವು. ಇವರು ಜೋಗ- ಕಾರ್ಗಲ್ ಪಟ್ಟಣ ಪಂಚಾಯಿತಿಯ 8ನೇ ವಾರ್ಡ್ನ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದರು.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಸದಸ್ಯನ ಸದಸ್ಯತ್ವ ರದ್ದು
ಬೀದರ್ನಲ್ಲೂ ನಡೆದಿತ್ತು ಲೋಕಾಯುಕ್ತ ಪೊಲೀಸರ ದಾಳಿ: ಕಳೆದ ತಿಂಗಳು ಲಖನಗಾಂವ್ ಗ್ರಾಮದ ರೈತ ಸಂಜೀವಕುಮಾರ ಚಂದ್ರಕಾಂತ ಎಂಬುವರಿಂದ 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಭೂ ಅಧೀಕ್ಷಕ ಚಿತ್ತಣ್ಣ ಪಾಟೀಲ ಅವರನ್ನು ಲೋಕಾಯುಕ್ತ ಪೊಲೀಸರ ರೆಡ್ಹ್ಯಾಂಡ್ ಆಗಿ ಹಿಡಿದು ಭಾಲ್ಕಿ ಪಟ್ಟಣದಲ್ಲಿ ವಶಕ್ಕೆ ಪಡೆದಿದ್ದರು. ಇವರು ಜಮೀನು ಸರ್ವೇ ಮಾಡಿಕೊಡಲು ಸುಮಾರು 40 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 5 ಸಾವಿರ ರೂ. ನಗದನ್ನು ರೈತನಿಂದ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಭೂ ಅಧೀಕ್ಷಕ: ರೈತನಿಂದ ಲಂಚ ಪಡೆಯುತ್ತಿದ್ದ ಚಿತ್ತಣ್ಣ ಪಾಟೀಲ