ಕಾರವಾರ : ಕರಾವಳಿ ಜಿಲ್ಲೆಗಳ ಪೈಕಿ ಉತ್ತರಕನ್ನಡ ಅತಿ ಉದ್ದದ ಕಡಲತೀರಗಳನ್ನೊಳಗೊಂಡಿದ್ದರೂ ಕೂಡ ಜಿಲ್ಲೆಯಲ್ಲಿರುವ ಕೆಲವೇ ಬಂದರುಗಳ ಮೂಲಕ ವ್ಯವಹಾರ ನಡೆಸಲಾಗುತ್ತದೆ. ಇದೀಗ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಕಾರವಾರದ ಮಾಜಾಳಿ ಬಳಿ ಬೃಹತ್ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಆದರೆ ಯೋಜನೆ ಅನುಷ್ಠಾನದ ಬಗ್ಗೆ ಸ್ಥಳೀಯರಲ್ಲಿ ಪರ ವಿರೋಧ ಉಂಟಾಗಿದೆ.
ಹೌದು, ರಾಜ್ಯದಲ್ಲೇ ಅತಿ ಉದ್ದದ ಕಡಲ ತೀರ ಒಳಗೊಂಡಿರುವ ಜಿಲ್ಲೆಗಳಲ್ಲಿ ಉತ್ತರಕನ್ನಡವು ಒಂದು. ಆದರೆ ಉಡುಪಿ, ಮಂಗಳೂರು ಜಿಲ್ಲೆಗಳಿಗೆ ಹೋಲಿಕೆ ಮಾಡಿದ್ದಲ್ಲಿ ಜಿಲ್ಲೆಯ ಅಭಿವೃದ್ಧಿ, ಯೋಜನೆ ಅನುಷ್ಠಾನಗಳು ಅಷ್ಟಕ್ಕಷ್ಟೆ. ಆದರೆ, ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಕಾರವಾರ ತಾಲೂಕಿನ ಮಾಜಾಳಿ ಕಡಲತೀರದ ಬಳಿ ಬೃಹತ್ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಪರಿಸರ ಇಲಾಖೆಯಿಂದ ಸಾರ್ವಜನಿಕ ಅಹವಾಲು ಆಲಿಕೆ ಸಭೆ ಕೂಡ ಮಾಡಲಾಗಿದೆ. ಆದರೆ, ಈ ವೇಳೆ ಪರ-ವಿರೋಧ ವ್ಯಕ್ತವಾಗಿದೆ.
ಯೋಜನೆಯಿಂದ ಉದ್ಯೋಗಾವಕಾಶ, ಮೂಲಭೂತ ಸೌಕರ್ಯ ಸಿಗುವುದರಿಂದ ಯೋಜನೆ ಆಗಲಿ ಎಂದು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಯೋಜನೆ ಬಗ್ಗೆ ಸ್ಥಳೀಯರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ, ಏಕಾಏಕಿ ಸಭೆ ಮಾಡಿದ್ದಾರೆ. ಅಲ್ಲದೇ, ಇದರಿಂದ ಸ್ಥಳೀಯವಾಗಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವವರಿಗೆ ತೊಂದರೆಯಾಗಲಿದೆ. ಆದ್ದರಿಂದ ಸುತ್ತಮುತ್ತಲಿನ ಊರಿನ ಜನರನ್ನು ಸೇರಿಸಿ ಲಾಭ ನಷ್ಟದ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಯೋಜನೆ ಅನುಷ್ಠಾನದಿಂದ ಮೀನುಗಾರಿಕಾ ಬಂದರು ನಿರ್ಮಾಣವಾಗುವುದಲ್ಲದೆ ಸ್ಥಳೀಯವಾಗಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಯಾಗಲಿದೆ. ದೊಡ್ಡ ಮಟ್ಟದಲ್ಲಿ ಮೀನುಗಾರಿಕಾ ವಹಿವಾಟು ಮಾಜಾಳಿ ಕಡಲತೀರದಲ್ಲಿಯೇ ನಡೆಯಲಿದೆ. ಜೊತೆಗೆ, ಪಕ್ಕದ ಗೋವಾ ಕೂಡ ಸಮೀಪದಲ್ಲಿರುವುದರಿಂದ ವಹಿವಾಟು ನಡೆಸಲು ಸಹಕಾರಿಯಾಗಲಿದೆ. ಆದರೆ, ಸ್ಥಳೀಯರಿಗೆ ಸೂಕ್ತ ಮಾಹಿತಿ ಸಿಗದ ಕಾರಣಕ್ಕೆ ಕೆಲವರು ವಿರೋಧ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದ್ರೆ, ಜಿಲ್ಲೆಗೆ ಯಾವುದೇ ಯೋಜನೆ ತರುವುದಿಲ್ಲ ಎಂದು ಹೇಳುತ್ತಿದ್ದ ಕಾರಣ ಈ ಬಂದರು ಮಂಜೂರು ಮಾಡಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಉಡುಪಿ, ಮಂಗಳೂರು ಭಾಗದ ಮೀನುಗಾರರು ತಮಗೆ ನೀಡುವಂತೆ ಕೇಳುತ್ತಿದ್ದಾರೆ. ಯೋಜನೆ ಅನುಷ್ಠಾನದಿಂದ ಸಣ್ಣಪುಟ್ಟ ತೊಂದರೆ ಆಗಬಹುದು. ಆದರೆ, ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರು ಸಹಕಾರ ನೀಡಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಒಟ್ಟಾರೆ, ಸರ್ಕಾರ ಬಂದರು ನಿರ್ಮಾಣಕ್ಕೆ ಅನುದಾನ ನೀಡಿದರೂ ಯೋಜನೆ ಬಗ್ಗೆ ಸ್ಥಳೀಯರಿಗೆ ಸೂಕ್ತ ಮಾಹಿತಿ ಸಿಗದ ಹಿನ್ನೆಲೆ ಪರ ವಿರೋಧಕ್ಕೆ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳೀಯರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಲಾಭ ನಷ್ಟದ ಬಗ್ಗೆ ತಿಳುವಳಿ ನೀಡಿ ಯೋಜನೆ ಅನುಷ್ಠಾನಗೊಳಿಸಬೇಕಿದೆ.
ಇದನ್ನೂ ಓದಿ : ಉತ್ತರಕನ್ನಡದ ಹಳೆ ಘೋಷಣೆ ಕೈಬಿಟ್ಟ ಬಜೆಟ್ : ನಿರಾಸೆ ಜೊತೆಗೆ ಹೆಚ್ಚಿದ ನಿರೀಕ್ಷೆ!