ಕಾರವಾರ : ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಸಮುದ್ರದಲ್ಲಿ ಈಜಲು ತೆರಳಿ ಅಪಾಯಕ್ಕೆ ಸಿಲುಕಿದ್ದ ಇಬ್ಬರು ಯುವಕರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಬೆಂಗಳೂರು ಮೂಲದ ಕುಶಾಲ್ ಗೌಡ, ಪ್ರತಾಪ್ ಗೌಡ ರಕ್ಷಣೆಗೊಳಗಾದ ಯುವಕರು. ಬೆಂಗಳೂರಿನಿಂದ ಒಟ್ಟು 9 ಸ್ನೇಹಿತರೊಂದಿಗೆ ಇವರು ಗೋಕರ್ಣದ ಕುಡ್ಲೆ ಬೀಚಿಗೆ ಆಗಮಿಸಿದ್ದರು.
ಈ ವೇಳೆ ಸಮುದ್ರದಲ್ಲಿ ಈಜಲು ತೆರಳಿ ಇಬ್ಬರು ಯುವಕರು ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದು, ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ.
ತಕ್ಷಣ ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಸಂಜೀವ ಹೊಸ್ಕಟ್ಟ ಮತ್ತು ಕುಮಾರ್ ಅಂಬಿಗ ತೆರಳಿ ಇಬ್ಬರನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ. ದೊಡ್ಡ ಅವಘಡ ತಪ್ಪಿಸಿದ ಲೈಫ್ ಗಾರ್ಡ್ ಕಾರ್ಯಕ್ಕೆ ಪ್ರವಾಸಿಗರು ಅಭಿನಂದನೆ ಸಲ್ಲಿಸಿದ್ದಾರೆ.