ಕಾರವಾರ : ಓರ್ವ ಮಗನನ್ನು ಕಳೆದುಕೊಂಡ ಮಹಿಳೆಗೆ ಇನ್ನೋರ್ವ ಮಗನನ್ನೂ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ದಾಂಡೇಲಿ ತಾಲೂಕಿನ ಗಾಂಧಿನಗರದಲ್ಲಿ ನಡೆದಿದೆ. ರಕ್ಷಣೆ ನೀಡುವಂತೆ ಕುಟುಂಬಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ.
ಗಾಂಧಿ ನಗರದ ಅನಿತಾ ಪ್ರಕಾಶ್ ಪಾಟೀಲ್ ಹಾಗೂ ಕುಟುಂಬದವರು ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಪಕ್ಕದ ಮನೆಯವರಾದ ರುಕ್ಕಿಣಿ ಬಾಗಡೆ ಹಾಗೂ ಆಕೆಯ ಮಗ ಪ್ರದೀಪ್ ರಾತ್ರಿ ವೇಳೆ ಮನೆಗೆ ಲಾಂಗ್ ಹಿಡಿದು ಬಂದು ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಪ್ರಭಾವಿಗಳಾದ ಕಾರಣ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅನಿತಾ ಅವರು ಆರೋಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಅನಿತಾ ಅವರ ಹಿರಿಯ ಮಗ ಮನೋಜ್, ತಮ್ಮ ಮಗಳನ್ನ ಪ್ರೀತಿಸ್ತಿದ್ದಾನೆಂದು ಅನುಮಾನಗೊಂಡ ಪಕ್ಕದ ಮನೆಯ ರುಕ್ಕಿಣಿ ಬಾಗಡೆ ಅವರು, ಮೂರು ತಿಂಗಳ ಹಿಂದೆ ಬಂದು ಬೆದರಿಕೆ ಹಾಕಿದ್ದರು. ನಂತರ ಅನಿತಾ ಹಾಗೂ ಅವರ ಮಗ ಮನೋಜ್, ರುಕ್ಮಿಣಿ ಅವರ ಮನೆಗೆ ತೆರಳಿ, ಅವರಿಬ್ಬರ ನಡುವೇ ಪ್ರೀತಿ ಇಲ್ಲ ಕೇವಲ ಸ್ನೇಹಿತರು ಎಂದು ತಿಳಿಸಿದ್ದರಂತೆ. ಇಷ್ಟಾದರೂ ಕೂಡ ಅವರು ಹಗೆತನ ಸಾಧಿಸುತ್ತಿದ್ದರಂತೆ.
ಮೇ 2ರಂದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಗುಂಪೊಂದು ಮನೋಜನ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡಿತ್ತು. ಬಳಿಕ ಅಲ್ಲಿಯೇ ಇದ್ದ ಮತ್ತೋರ್ವ ಮಗ ಸಂದೀಪ್ ಪಾಟೀಲ್ ಎದೆಗೆ ಚಾಕು ಚುಚ್ಚಿ ಕೊಲೆ ಮಾಡಲಾಗಿತ್ತು. ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ನಮಗೆ ಜೀವ ಬೆದರಿಕೆ ಹಾಕಿದ ಪ್ರದೀಪ್ ಬಾಗಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೂ, ಪೊಲೀಸರು ಹಾಗೇ ಬಿಟ್ಟಿದ್ದರು ಅಂತಾ ಅನಿತಾ ಆರೋಪಿಸಿದ್ದಾರೆ.
ಕಳೆದ ಒಂದು ವಾರದಿಂದ ಪ್ರದೀಪ್ ಮತ್ತು ಆತನ ಕಡೆಯವರು ಕತ್ತಿಯೊಂದಿಗೆ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ. ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೊದಲೇ ಓರ್ವ ಮಗನನ್ನು ಕಳೆದುಕೊಂಡಿದ್ದು, ಇದೀಗ ಮತ್ತೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಕೂಡಲೇ ನಮಗೆ ರಕ್ಷಣೆ ನೀಡಿ ಜೀವ ಬೆದರಿಕೆ ಹಾಕಿದವರ ಮೇಲೆ ಪ್ರಕರಣ ದಾಖಲಿಸುವಂತೆ ಅನಿತಾ ಪ್ರಕಾಶ್ ಪಾಟೀಲ್ ಮನವಿ ಮಾಡಿದ್ದಾರೆ.