ಕಾರವಾರ: ಸಾಗರಮಾಲಾ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಕಾರವಾರದಲ್ಲಿ ಮೀನುಗಾರರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ಪ್ರಾರಂಭಿಸಿದ್ದಾರೆ.
ಇಂದು ನಗರದ ಮುಖ್ಯ ಅಂಚೆ ಕಛೇರಿ ಬಳಿ ಜಮಾಯಿಸಿದ ಸುಮಾರು ಐವತ್ತಕ್ಕೂ ಅಧಿಕ ಮೀನುಗಾರರು ಪ್ರಧಾನಿಗೆ ಪತ್ರ ಬರೆದಿದ್ದು, ಸಾಗರಮಾಲಾ ಯೋಜನೆಯಡಿ ಇಲ್ಲಿನ ವಾಣಿಜ್ಯ ಬಂದರಿನ ವಿಸ್ತರಣೆ ಮಾಡಲಾಗುತ್ತಿದೆ. ಆದರೆ ಈ ಯೋಜನೆಯಿಂದಾಗಿ ಮೀನುಗಾರರು ಮೀನುಗಾರಿಕೆ ನಡೆಸಲು ಅಡ್ಡಿಯಾಗಲಿದೆ ಎಂದರು.

ಈ ನಿಟ್ಟಿನಲ್ಲಿ ಮೀನುಗಾರರ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯಲು ಕಾರವಾರದಿಂದ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯ ಒಟ್ಟು ಒಂದು ಸಾವಿರ ಪತ್ರಗಳನ್ನ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಿಕೊಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಸಾಗರಮಾಲಾ ಯೋಜನೆಯನ್ನ ಜಾರಿಗೊಳಿಸದಂತೆ ಈ ಮೂಲಕ ಪ್ರಧಾನಿಗೆ ಮನವಿ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕರಾವಳಿಯ ಪ್ರತಿ ತಾಲೂಕಿನಿಂದಲೂ ಪ್ರಧಾನಿಗೆ ಪತ್ರಗಳನ್ನ ಕಳುಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.