ಕಾರವಾರ (ಉತ್ತರ ಕನ್ನಡ): ''ಶಿವರಾಮ ಹೆಬ್ಬಾರ್ ಅವರಿಗೆ ಕಾಂಗ್ರೆಸ್ ಗೃಹ ಪ್ರವೇಶಕ್ಕೆ ಯಾವಾಗಲೂ ಅವಕಾಶವಿದೆ. ಅವರ ಮನೆಗೆ ಅವರು ಬರ್ತಿದ್ದಾರೆ. ಆದರೆ ಯಾವುದೇ ಅಧಿಕಾರ, ಹುದ್ದೆ ಬಯಸಿ ಪಕ್ಷಕ್ಕೆ ಬರಬೇಡಿ ಎಂದಿದ್ದೇನೆ'' ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಬರುತ್ತೇನೆ ಎನ್ನುವವರಿಗೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಮನೆಯ ಬಾಗಿಲು ಯಾವಾಗಲೂ ತೆರೆದಿದೆ. ಯಾರು ಬೇಕಾದರೂ ಬರಬಹುದು. ಅವರ ಕಾಂಗ್ರೆಸ್ ಗೃಹ ಪ್ರವೇಶಕ್ಕೆ ಅವರೇ ದಿನ ನಿಗದಿಪಡಿಸಲಿ'' ಎಂದರು.
''ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಸ್ಪರ್ಧಿಸಲು ನಮ್ಮಲ್ಲಿ ಹತ್ತು ಜನ ಅಭ್ಯರ್ಥಿಗಳು ಇದ್ದಾರೆ. ಶಿವರಾಮ ಹೆಬ್ಬಾರ್ ಅವರನ್ನು ಕರೆಸುವ ಅಗತ್ಯವಿಲ್ಲ. ಲೋಕಸಭೆ ಚುನಾವಣೆಗೆ ಜಿಲ್ಲೆಯಿಂದ ಕಾಂಗ್ರೆಸ್ನ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಹೀಗಾಗಿ ಶಿವರಾಮ ಹೆಬ್ಬಾರ ಅವರನ್ನು ಕರೆಸಿ ಅಭ್ಯರ್ಥಿಯಾಗಿಸುವ ಯೋಚನೆ ಇಲ್ಲ. ಸಂಸದ, ಸಚಿವ ಹಾಗೂ ಮುಖ್ಯಮಂತ್ರಿಯಾಗುವ ಆಸೆಯಿಂದ ಬರಬೇಡಿ. ಅಲ್ಲಿ ಸರಿಯಿಲ್ಲ ಎನ್ನಿಸಿದರೆ ಮಾತ್ರ ಬನ್ನಿ ಎಂದು ಹೆಬ್ಬಾರರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ನಾವಾಗಿಯೇ ಅವರಿಗೆ ಆಹ್ವಾನ ನೀಡಿಲ್ಲ. ಇದು ಅವರ ಮನೆ, ಎಂದಿಗೂ ಬಾಗಿಲು ತೆರೆದೇ ಇರುತ್ತದೆ. ಗೃಹಪ್ರವೇಶ ಮಾಡಿಕೊಳ್ಳುವುದು ಅವರಿಗೆ ಬಿಟ್ಟಿದ್ದು'' ಎಂದು ತಿಳಿಸಿದರು.
ಜನರು ಬಿಜೆಪಿಯವರ ಮಾತನ್ನು ನಂಬಬಾರದು - ಮಂಕಾಳ ವೈದ್ಯ: ಗೃಹಲಕ್ಷ್ಮಿ ಯೋಜನೆಯನ್ನು ಎಸ್.ಟಿ. ಸೊಮಶೇಖರ ಅವರು ಹೊಗಳಿರುವ ಬಗ್ಗೆ ಮಾತನಾಡಿದ ಅವರು, ''ಇದು ಜನಪರ ಕಾರ್ಯವಾಗಿರುವುದರಿಂದ ಮನುಷತ್ವ ಇದ್ದವರು ಹೊಗಳಲೇಬೇಕು. ನಾನೂ ಕೂಡ ವಿರೋಧ ಪಕ್ಷದಲ್ಲಿದ್ದರೆ ಹೊಗಳುತಿದ್ದೆ. ಬಿಜೆಪಿಯಂತೆ ಸುಳ್ಳು ಹೇಳುವ ಚಾಳಿ ನಮಗಿಲ್ಲ. ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ರೂ. ಅವರ ಖಾತೆಗೆ ಹಾಕುವುದಾಗಿ ಸುಳ್ಳು ಹೇಳಿದ್ದರು. 10 ವರ್ಷವಾದರೂ ಹಣ ಬರಲಿಲ್ಲ. ಬದಲಾಗಿ ಅವರದ್ದೇ ಕಪ್ಪು ಹಣ ಇದೆ. ಹೀಗಾಗಿ ಜನರು ಬಿಜೆಪಿಯವರ ಮಾತನ್ನು ನಂಬಬಾರದು'' ಎಂದು ಕಿಡಿಕಾರಿದರು.
ಜಗದೀಶ ಶೆಟ್ಟರ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ''ಹಿರಿಯರಾದ ಅವರು ಸ್ಪರ್ಧಿಸುವುದಾದರೆ ನಾವು ಸಹಕಾರ ಮಾಡುತ್ತೇವೆ. ಪ್ರಹ್ಲಾದ ಜೋಶಿ ಅವರು ಚುನಾವಣೆಯನ್ನು ಸ್ಪರ್ಧಿಸುವುದು ಖಚಿತವಿಲ್ಲ. ಅವರು ಈ ಮೊದಲೇ ಹೆದರಿದ್ದಾರೆ. ಒಂದು ವೇಳೆ ಜಗದೀಶ ಶೆಟ್ಟರ್ ಸ್ಪರ್ಧಿಸಿದರೆ, ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿಯ ಯಾರೂ ಕೂಡಾ ಅವರನ್ನು ಸೋಲಿಸಲು ಸಾಧ್ಯವಿಲ್ಲ'' ಎಂದು ಅವರು ತಿಳಿಸಿದರು.
ಲೋಕಸಭೆ ಚುನಾವಣೆಯ ತಂತ್ರ: ''ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡವರ ಮೇಲೆ ಕಾಳಜಿ ಇದ್ದರೆ, ಗ್ಯಾಸ್ ಬೆಲೆ ಇಳಿಕೆ ಮಾಡಲಿ, ಮೋದಿ ಅವರು ಪ್ರಧಾನಿಯಾದಾಗ 450 ರೂ. ಇದ್ದ ಗ್ಯಾಸ್ ಬೆಲೆ ಈಗ 1,200 ರೂ. ಆಗಿದೆ. ಮೇಲ್ನೋಟಕ್ಕೆ 200 ರೂ. ಇಳಿಕೆ ಮಾಡಿದರೆ ಏನು ಪ್ರಯೋಜನ? 450 ಮಾಡಲಿ ವಯಕ್ತಿಕವಾಗಿ ಮೋದಿ ಅವರನ್ನು ನಾವು ಅಭಿನಂದಿಸುತ್ತೇವೆ. ಇದು ಕೇವಲ ಲೋಕಸಭೆ ಚುನಾವಣೆಯ ತಂತ್ರ ಎಂದು ಟೀಕಿಸಿದದರು. ''ಕಾಂಗ್ರೆಸ್ ಗ್ಯಾರಂಟಿಗಳಿಗೂ ಲೋಕಸಭೆ ಚುನಾವಣೆಗೂ ಸಂಬಂಧವಿಲ್ಲ. ನಾವು ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಇದೆ. ಬಡವರಿಗೆ ಅಗತ್ಯ ಯೋಜನೆ ತಲುಪಿಸ್ತೇವೆ'' ಎಂದರು.
ಇದನ್ನೂ ಓದಿ: ಮಲೆನಾಡಿಗರ ಬಹುದಿನದ ಕನಸು ನನಸು: ಶಿವಮೊಗ್ಗದಲ್ಲಿ ಇಂದಿನಿಂದ ಲೋಹದ ಹಕ್ಕಿಗಳ ಹಾರಾಟ