ಭಟ್ಕಳ: ನಮ್ಮ ತಾಲೂಕಿನ ಜನತೆಗೆ ಜಿಲ್ಲಾಸ್ಪತ್ರೆಯ ಉಪಯೋಗವಿಲ್ಲವಾದರೆ ಅದರ ಸಂಪೂರ್ಣ ವ್ಯವಸ್ಥೆ ನಮಗೆ ಕೊಡಿ. ನಾವು ನಮ್ಮ ಪಕ್ಕದ ಜಿಲ್ಲೆಯವರಿಗೂ ಕೂಡ ಆಶ್ರಯ ಕೊಡುತ್ತೇವೆ ಎಂದು ಶಾಸಕ ಸುನೀಲ್ ನಾಯ್ಕ ಕಾರವಾರದ ರಾಜಕೀಯ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಕಾರ್ಮಿಕ ಇಲಾಖೆಯಿಂದ ಪತ್ರಿಕಾ ವಿತರಕರಿಗೆ ಬಂದಂತಹ ದಿನಸಿ ಕಿಟ್ ವಿತರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಕೋವಿಡ್-19 ಸೋಂಕಿತರಿಗೆ ತಾಲೂಕಿನಲ್ಲಿ ಚಿಕಿತ್ಸೆಗೆ ಯಾವುದೇ ವ್ಯವಸ್ಥೆ ಇಲ್ಲವಾದ ಹಿನ್ನೆಲೆಯಲ್ಲಿ ಕಾರವಾರದ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ತಾಲೂಕಿನ ಎಲ್ಲಾ ಸೋಂಕಿತರನ್ನು ಚಿಕಿತ್ಸೆಗಾಗಿ ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದರು.
ಇದಕ್ಕೆ ಕಾರವಾರದ ರಾಜಕೀಯ ಮುಖಂಡರು ಭಟ್ಕಳದ ಸೋಂಕಿತರನ್ನು ಕಾರವಾರಕ್ಕೆ ತರಬೇಡಿ, ಅವರಿಗೆ ಅಲ್ಲಿಯೇ ಚಿಕಿತ್ಸೆ ನೀಡಿ ಎಂದು ಮಾಧ್ಯಮದವರೆದುರು ಹೇಳಿಕೆ ನೀಡಿರುವುದು ತುಂಬಾ ಬೇಸರದ ವಿಷಯವಾಗಿದೆ ಎಂದರು.
ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಇರುವುದು ನಮ್ಮ ಜಿಲ್ಲೆಯಲ್ಲಿನ ಪತ್ರಿಯೊಬ್ಬರಿಗೂ ನೇರವಾಗಲು ಇರುವುದೇ ವಿನಹ ಕಾರವಾರಕ್ಕೆ ಮಾತ್ರ ಆ ಆಸ್ಪತ್ರೆ ಸೀಮಿತವಾಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಬರಬೇಡಿ ಎನ್ನುವುದು ಶೋಭೆ ತರುವಂತದ್ದಲ್ಲ. ಈ ಸಂದರ್ಭದಲ್ಲಿ ಮಾನವೀಯತೆ ಮುಖ್ಯ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.