ಶಿರಸಿ(ಉತ್ತರ ಕನ್ನಡ) : ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಪೀಠದ ಜಗದ್ಗುರುಗಳು ಒತ್ತಡ ತರೋದು ಸ್ವಾಭಾವಿಕ. ಆ ಸಮಾಜದ ಏಳಿಗೆಗಾಗಿ ಒತ್ತಡ ತರುವುದು ಸಹಜ. ಮುಖ್ಯಮಂತ್ರಿಗಳಿಗೆ ಪಂಚಮಸಾಲಿ ಸಮಾಜದ ಜೊತೆಜೊತೆಗೆ ಇತರ ಸಮಾಜದ ಏಳಿಗೆಯನ್ನು ನೋಡಬೇಕಾದ ಕಾನೂನಾತ್ಮಕವಾದ ರೀತಿಯಲ್ಲಿ ಕಾರ್ಯ ನಿರ್ವಹಿಸ ಬೇಕಿದೆ.
ಇನ್ನೊಂದು ಸಮಾಜಕ್ಕೆ ಅನ್ಯಾಯವಾಗದ ರೀತಿಯಲ್ಲಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಕೊಡಿಸುವ ರೀತಿಯಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆಯೋ ಆ ಎಲ್ಲ ಪ್ರಾಥಮಿಕ ಕ್ರಮದ ಹೆಜ್ಜೆಗಳನ್ನು ಮುಖ್ಯಮಂತ್ರಿಗಳು ದೃಢವಾಗಿ ಇಟ್ಟಿದ್ದಾರೆ ಎಂದು ಲೊಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ಹೇಳಿದರು.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಶ್ವತವಾದ ಹಿಂದುಳಿದ ವರ್ಗಗಳ ಆಯೋಗ ನೇಮಿಸಿ ಅದಕ್ಕೆ ಜಯಪ್ರಕಾಶ್ ಹೆಗಡೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಎಂಪೆರಿಕಲ್ ಡಾಟಾ ಸಂಗ್ರಹಿಸುತ್ತಿದ್ದಾರೆ, 15 ರಿಂದ 16 ಜಿಲ್ಲೆಗಳಲ್ಲಿ ಎಂಪೆರಿಕಲ್ ಡಾಟಾ ಸಂಗ್ರಹಿಸಲಾಗಿದೆ.
ದತ್ತಾಂಶ ಆಧರಿತವಾಗಿ ಘೋಷಣೆ ಮಾಡಲಾಗುವುದು. ಒಟ್ಟಾರೆಯಾಗಿ ನೀಡಿದರೆ ಚೆನ್ನೈ, ಮಹಾರಾಷ್ಟ್ರದಲ್ಲಿ ಕೋರ್ಟ್ನಲ್ಲಿ ತಡೆಯಾಜ್ಞೆ ನೀಡಿದಂತಾಗುತ್ತದೆ. ಶಾಶ್ವತವಾಗಿ ಮೀಸಲಾತಿ ಉಳಿಯಬೇಕು ಅನ್ನೋ ನಿಟ್ಟಿನಲ್ಲಿ ಸುರಕ್ಷತಾ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ ಎಂದು ಸಚಿವರು ಪ್ರತಿಕ್ರಿಯಿಸಿದರು.
ಇನ್ನು ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿರುವುದಕ್ಕೆ ಸ್ವಾಗತ. ದೇಶದ್ರೋಹಿ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರನ್ನು ಬಂಧಿಸಿದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಈ ರಾಜ್ಯದ ನಾಯಕರು ಈಗ ಏನು ಹೇಳುತ್ತಾರೆ ಅನ್ನೋದನ್ನು ಕೇಳಿನೋಡಬೇಕು. ಕೇವಲ ಬಗಲಿಗೆ ಚೀಲ ಹಾಕಿಕೊಂಡು ಹೋದರೆ ಬುದ್ದಿಜೀವಿಗಳು ಆಗೋದಿಲ್ಲ. ದೇಶದ ಅಖಂಡತೆ ಏಕತೆ ಮೊದಲು ಮುಖ್ಯ, ಅದನ್ನು ಕಾಪಾಡಬೇಕು ಅದನ್ನು ಈ ದೇಶದ ಪ್ರಧಾನಿ ಕಾಪಾಡುತ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಸಿಸಿ ಪಾಟೀಲ್ ಹೇಳಿದರು.
ಇದನ್ನೂ ಓದಿ : ದೇಶದಲ್ಲಿ ಪಿಎಫ್ಐ ಶಾಶ್ವತವಾಗಿ ಬ್ಯಾನ್ ಮಾಡಬೇಕು: ಬಸನಗೌಡ ಪಾಟೀಲ್ ಯತ್ನಾಳ್