ಕಾರವಾರ (ಉತ್ತರ ಕನ್ನಡ): ಕಿರು ಸೇತುವೆ ಅಂಚಿನ ರಸ್ತೆ ಕುಸಿತವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಗ್ರಾಮದ ಬಳಿ ನಡೆದಿದೆ.
ಅಂಕೋಲಾದ ಬಾಳೆಗುಳಿಯಿಂದ ಯಲ್ಲಾಪುರ ಸಂಪರ್ಕಿಸುವ ಹೆದ್ದಾರಿಯಲ್ಲಿ ಅತೀ ಹೆಚ್ಚು ಸರಕು ಸಾಗಣೆ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ರಾತ್ರಿಯಿಡೀ ಸುರಿದ ಮಳೆಯಲ್ಲಿ ರಸ್ತೆಯ ಪಿಚ್ಚಿಂಗ್ ಕಿತ್ತುಹೋಗಿ ರಸ್ತೆ ಕುಸಿದಿದ್ದು, ಹೆದ್ದಾರಿಯಲ್ಲಿ 2 ಮೀಟರ್ನಷ್ಟು ಅಗಲದ ಹೊಂಡ ಬಿದ್ದಿದೆ. ದಿನವೊಂದಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಉತ್ತರಕನ್ನಡ ವಿಭಾಗದ ಕಿರಿಯ ಅಭಿಯಂತರ ಪಿ. ಕೆ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಮಳೆ ಬೀಳುತ್ತಿರುವ ಹಿನ್ನೆಲೆ ಪಾಲಿಥಿನ್ ಶೀಟಿನ ಹೊದಿಕೆಯನ್ನು ಹಾಕಿ ಮಳೆಯಿಂದ ಇನ್ನೂ ಕುಸಿಯದಂತೆ ರಕ್ಷಣೆ ನೀಡಲಾಗುವುದು. ಪರಿಣಿತರ ತಂಡದಿಂದ ಸ್ಥಳ ಪರೀಕ್ಷೆ ನಡೆಸಿ ತುರ್ತು ದುರಸ್ತಿ ಕಾಮಗಾರಿ ನಡೆಸಲಾಗುವುದು ಎಂದಿದ್ದಾರೆ.
ರಸ್ತೆ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಸಂತೋಷ ಶೆಟ್ಟಿ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಬ್ಯಾರಿಕೇಡ್ ಅಳವಡಿಸಿ ಹೆದ್ದಾರಿಯ ಒಂದು ಬದಿಯಿಂದ ಮಾತ್ರ ವಾಹನಗಳು ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮಳೆಯಲ್ಲಿಯೂ ಪೊಲೀಸ್ ಸಿಬ್ಬಂದಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಓದಿ: ವಿಜಯಪುರದಲ್ಲಿ ಭಾರಿ ಮಳೆ.. ಭೀಮಾನದಿಗೆ ಹೆಚ್ಚುವರಿ ನೀರು.. ಸೇತುವೆ ಮುಳುಗಡೆ