ಶಿರಸಿ(ಉತ್ತರ ಕನ್ನಡ): ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನವೊಂದನ್ನು ಅದರ ಮಾಲೀಕರು ರಸ್ತೆಯ ಮೇಲೆ ಬಿಟ್ಟು ಹೋಗಿದ್ದರು. ಮಾಲೀಕ ಬಂದು ತನ್ನನ್ನು ಮನೆಗೆ ಕರೆದೊಯ್ಯುತ್ತಾರೆ ಎಂದು ಎದುರು ನೋಡುತ್ತಿದ್ದ ಶ್ವಾನ ಇಂದು ಕೊನೆಯುಸಿರೆಳೆದಿರುವ ಮನಕುಲಕುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಪರಿಚಿತರು ತಾವು ಸಾಕಿದ ಲ್ಯಾಬ್ರಡಾರ್ ಶ್ವಾನ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆ ಗೋಣಿ ಚೀಲದಲ್ಲಿ ಕಟ್ಟಿ ಹಾಕಿ ಅದನ್ನು ಪಟ್ಟಣದ ಚಿಪಗಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ರಸ್ತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನವನ್ನು ಕಂಡ ಮರಾಠಿಕೊಪ್ಪದ ಗ್ಯಾರೆಜ್ ಮೇಸ್ತ್ರಿ ನಾಗರಾಜ ನಾಯ್ಕ ಅದನ್ನು ಕೂಡಲೇ ಪಟ್ಟದ ಪ್ರಾಣಿ, ಪಕ್ಷಿ ತಜ್ಞ ರಾಜೇಂದ್ರ ಸಿರ್ಸಿಕರ್ ನಡೆಸುತ್ತಿರುವ ಅನಾಥ ಪ್ರಾಣಿ ಪಕ್ಷಿಗಳ ರಕ್ಷಣಾ ಮತ್ತು ಪುನರ್ ವಸತಿ ಕೆಂದ್ರಕ್ಕೆ ಕರೆದೊಯ್ದಿದ್ದರು.
ಚಿಕಿತ್ಸೆ, ಅಂತ್ಯಕ್ರಿಯೆ ನಡೆಸಿ ಮಾನವೀಯತೆ.. ಶ್ವಾನದ ಪರಿಸ್ಥಿತಿಯನ್ನು ಗಮನಿಸಿದ ರಾಜೇಂದ್ರ ಸಿರ್ಸಿಕರ್ ಅದಕ್ಕೆ ಚಿಕಿತ್ಸೆಯನ್ನು ನೀಡಿದ್ದರು. ಆದರೇ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಶ್ವಾನ ಕೊನೆಯುಸಿರೆಳೆದಿದೆ. ಮಾಲೀಕರ ಬರುವಿಕೆಯನ್ನ ಕಾಯುತ್ತಿದ್ದ ಶ್ವಾನಕ್ಕೆ ಮಾಲೀಕನ ದರ್ಶನ ಆಗದೆ ಇರುವುದು ದುರಾದೃಷ್ಟ. ಇನ್ನು, ಅದರ ಅಂತ್ಯಸಂಸ್ಕಾರ ಕಾರ್ಯವನ್ನೂ ಕೂಡ ಸೂರಜ್ ಸಿರ್ಸಿಕರ್ ಮಾಡಿದ್ದಾರೆ.
ಲ್ಯಾಬ್ರಡಾರ್ ಶ್ವಾನದ ವಿಶೇಷವೆಂದರೆ ಅದು ಜನ ಸ್ನೇಹಿ ಪ್ರಾಣಿಯಾಗಿದ್ದು ಎಲ್ಲರನ್ನೂ ಆಕರ್ಷಿಸುತ್ತದೆ. ಅಲ್ಲದೇ ಜನರೊಂದಿಗೆ ಬೆರೆಯಲು ಈ ಶ್ವಾನಗಳು ಹೆಚ್ಚಾಗಿ ಬಯಸುತ್ತವೆ. ಈ ಕಾರಣದಿಂದಲೇ ಜನರು ಲ್ಯಾಬ್ರೊಡರ್ ತಳಿಯನ್ನ ಬಹಳ ಇಷ್ಟಪಡುತ್ತಾರೆ ಮತ್ತು ಅವುಗಳನ್ನು ಸಾಕುತ್ತಾರೆ. ಇನ್ನು, ಇತ್ತೀಚೆಗೆ ಲ್ಯಾಬ್ರಡಾರ್ ಶ್ವಾನ ಕುರಿತಾದ ಚಾರ್ಲಿ ಎಂಬ ಕನ್ನಡ ಚಿತ್ರವು ತೆರೆ ಮೇಲೆ ಅತ್ಯಂತ ಯಶಸ್ಸು ಕಂಡಿದೆ. ಅಲ್ಲದೇ ಶ್ವಾನ ಪ್ರೇಮಿಗಳ ಮನಸ್ಸನ್ನುಇ ಚಾರ್ಲಿ ಗೆದ್ದಿದೆ.
ಇದನ್ನೂ ಓದಿ: 5 ವರ್ಷದಿಂದ ಠಾಣೆಗೆ ಕಾವಲುದಾರ... 'ಜಾಕಿ'ಗೆ ಅಂತಿಮ ವಿದಾಯ ಹೇಳಿದ ಹುಬ್ಬಳ್ಳಿ ಪೊಲೀಸರು