ಕಾರವಾರ: ಅವರೆಲ್ಲ ಹೊರರಾಜ್ಯದಲ್ಲಿ ಕೆಲಸ ಮಾಡಿಕೊಂಡಿದ್ದ ರಾಜ್ಯದ ನಿವಾಸಿಗಳು. ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮನೆಗಳಿಗೆ ಹೋಗಲು ರಜೆ ಪಡೆದು ಆಗಮಿಸಿದ್ದರು. ಆದರೆ ಇದೀಗ ವಾಪಸ್ ಕೆಲಸಕ್ಕೆ ತೆರಳಬೇಕಂದ್ರೆ ಗಡಿಯಲ್ಲಿ ಕಿರಿಕಿರಿ ಪ್ರಾರಂಭವಾಗಿದ್ದು, ವಾಪಸ್ ತಮ್ಮ ಊರಿಗೆ ತೆರಳಲು ಹಣತೆತ್ತು ಗಡಿ ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರೋದು ಇದೀಗ ಕಾರ್ಮಿಕರಿಗೆ ಶಾಕ್ ನೀಡಿದೆ.
ರಾಜ್ಯದ ಕರಾವಳಿ ಜಿಲ್ಲೆ ಉತ್ತರ ಕನ್ನಡ ಹಾಗೂ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಗೋವಾ ರಾಜ್ಯ ಅವಳಿ ನಗರಗಳಂತೆಯೇ ಸರಿ. ಪ್ರತಿನಿತ್ಯ ಕೆಲಸಕ್ಕೆಂದು ರಾಜ್ಯದಿಂದ ಜನರು ಗೋವಾಕ್ಕೆ ತೆರಳುವುದು, ವ್ಯಾಪಾರ ವಹಿವಾಟಿಗಾಗಿ ಗೋವಾದಿಂದ ಜನರು ಕಾರವಾರಕ್ಕೆ ಆಗಮಿಸುವುದು ಸಾಮಾನ್ಯ. ಆದ್ರೆ ಇದೀಗ ಕೊರೊನಾ ಹಿನ್ನೆಲೆ ಅಂತಾರಾಜ್ಯ ಗಡಿಗಳು ಬಂದ್ ಆಗಿದ್ದು ಕೆಲಸ ನಿಮಿತ್ತ ಅನುಮತಿ ಪಡೆದು ರಾಜ್ಯದ ಕಾರ್ಮಿಕರು ಗೋವಾದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಹಬ್ಬಕ್ಕೆಂದು ಹೊರಟ ಜನ ಗಡಿಯಲ್ಲಿ ಸೂಕ್ತ ತಪಾಸಣೆಗೊಳಪಟ್ಟು ಯಾವುದೇ ಸಮಸ್ಯೆ ಇಲ್ಲದೇ ತಮ್ಮ ಊರುಗಳಿಗೆ ತೆರಳಿ ಸಂಭ್ರಮದಿಂದ ಕುಟುಂಬಸ್ಥರೊಂದಿಗೆ ಹಬ್ಬವನ್ನ ಆಚರಣೆ ಮಾಡಿದ್ದರು. ಇದೀಗ ಮತ್ತೆ ಕೆಲಸಕ್ಕೆ ಮರಳಲು ಮುಂದಾದರೆ ಗೋವಾ ಸರ್ಕಾರ ಪ್ರತಿಯೊಬ್ಬರಿಗೂ 2 ಸಾವಿರ ಹಣ ಪಾವತಿ ಮಾಡಿ ಕೊರೊನಾ ತಪಾಸಣೆ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡೇ ಆಗಮಿಸುವಂತೆ ಸೂಚಿಸಿದ್ದು, ಇದೀಗ ಹಬ್ಬಕ್ಕೆ ಬಂದ ಹಣವೆಲ್ಲ ಖಾಲಿ ಮಾಡಿಕೊಂಡವರು ಪರದಾಡಬೇಕಾಗಿದೆ ಎನ್ನುತ್ತಾರೆ ಕಾರ್ಮಿಕರು.
ಇನ್ನು ಕಾರವಾರ ಅಂಕೋಲಾ ಭಾಗದ ಸಾವಿರಾರು ಮಂದಿ ಯುವಕರು ಗೋವಾದ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನವರು ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಹೆಚ್ಚಿನ ವೇತನ ಪಡೆಯುವವರಲ್ಲ. ಹೀಗಾಗಿ ಬರುವ ವೇತನದಲ್ಲಿ ತಮ್ಮ ಹಾಗೂ ಕುಟುಂಬಸ್ಥರ ಜೀವನ ನಿರ್ವಹಣೆಯನ್ನ ನೋಡಿಕೊಳ್ಳಬೇಕಿದ್ದು ಹಲವರು ಹಬ್ಬಕ್ಕೆ ಬಂದು ಇದ್ದ ಹಣವನ್ನೆಲ್ಲಾ ಖರ್ಚು ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಕೆಲಸಗಳಿಗೆ ಮರಳುವುದು ರಾಜ್ಯದ ಕಾರ್ಮಿಕರಿಗೆ ಅನಿವಾರ್ಯವಾಗಿದ್ದು ಹಲವರು ತಮ್ಮ ಬಳಿಯಿದ್ದ ಹಣವನ್ನ ಒಟ್ಟುಗೂಡಿಸಿ ಗಡಿಯಲ್ಲಿ ನೀಡಿ ತಪಾಸಣೆಗೊಳಗಾಗಿದ್ದಾರೆ. ಇಲ್ಲವಾದಲ್ಲಿ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಅವಧಿಯನ್ನ ಪೂರ್ಣಗೊಳಿಸಬೇಕಿದ್ದು ಇದು ಮತ್ತೆ ಕೆಲಸಕ್ಕೆ ಅಡ್ಡಿಯಾಗುವುದರಿಂದ ಬೇರೆ ದಾರಿಯಿಲ್ಲದೇ ಹಣ ನೀಡಿ ತೆರಳಬೇಕಾಗಿದೆ.
ಆದ್ರೆ ಕರ್ನಾಟಕವನ್ನ ಪ್ರವೇಶಿಸಲು ಇಷ್ಟು ಕಠಿಣ ನಿಯಮಗಳು ಇಲ್ಲವಾಗಿದ್ದು, ಉದ್ಯೋಗ ಅಥವಾ ವ್ಯಾಪಾರ ದೃಷ್ಟಿಯಿಂದ ಕರ್ನಾಟಕವನ್ನ ಪ್ರವೇಶಿಸುವವರು ಕೊರೊನಾ ಪ್ರಮಾಣಪತ್ರವನ್ನ ತೆಗೆದುಕೊಂಡು ಬಂದಲ್ಲಿ ಪ್ರವೇಶ ನೀಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ತಿಳಿಸಿದ್ದಾರೆ. ಒಟ್ಟಾರೆ ಕೊರೊನಾದಿಂದಾಗಿ ಮೊದಲೇ ಆರ್ಥಿಕವಾಗಿ ಕುಗ್ಗಿ ಹೋಗಿದ್ದವರ ಮೇಲೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎನ್ನುವಂತೆ ಗೋವಾ ಸರ್ಕಾರ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಅಸಹನೀಯವಾಗಿದೆ.