ಶಿರಸಿ: ಸ್ನಾನದ ಮನೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ರಕ್ಷಣೆ ವೇಳೆ ಉರಗ ಸಂರಕ್ಷಕನ ಮೇಲೆಯೇ ಸರ್ಪವು ಎರಗಲು ಯತ್ನಿಸಿದ್ದು, ಸ್ವಲ್ಪದರಲ್ಲೇ ಆತ ಪಾರಾಗಿರುವ ಘಟನೆ ಶಿರಸಿ ತಾಲೂಕಿನ ರಾಗಿಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಉರಗಗಳು ತಂಪು ಜಾಗ ಹುಡುಕಿಕೊಂಡು ಮನೆಗಳತ್ತ ಬರುತ್ತಿವೆ. ಶಿರಸಿ ತಾಲೂಕಿನ ರಾಗಿಹೊಸಳ್ಳಿ ಗ್ರಾಮದ ಪರಮ ಮರಾಠಿ ಎಂಬುವರ ಮನೆಯ ಸ್ನಾನಗೃಹದ ಛಾವಣಿಯಲ್ಲಿ ಕಾಳಿಂಗ ಸರ್ಪ ಅಡಗಿಕೊಂಡಿತ್ತು. ಭಾರಿ ಗಾತ್ರದ ಕಾಳಿಂಗನ ಕಂಡ ಮನೆಯವರು ಅದನ್ನು ಹೆಬ್ಬಾವು ಎಂದುಕೊಂಡಿದ್ದರು.
ಗಂಟೆಗೂ ಹೆಚ್ಚು ಕಾಲ ಮನೆಯವರು ಹಾವು ಹೋಗಬಹುದು ಎಂದು ಕಾದರೂ ಕೂಡ ಅದು ಸ್ಥಳದಿಂದ ಕದಲಲಿಲ್ಲ. ನಂತರ ರಾಗಿಹೊಸಳ್ಳಿ ಡಿಆರ್ಎಫ್ಒ ವೇಣುಗೋಪಾಲ ಅವರ ಕರೆಯ ಮೇರೆಗೆ ಉರಗ ಸಂರಕ್ಷಕ ಪವನ್ ನಾಯ್ಕ ಸ್ಥಳಕ್ಕೆ ತೆರಳಿದ್ದಾರೆ. ಹಾವು ಎತ್ತರದಲ್ಲಿ ಇದ್ದಿದ್ದರಿಂದ ಸ್ನೇಕ್ ರೆಸ್ಕ್ಯೂ ಸ್ಟಿಕ್ ಮೂಲಕ ಪವನ್ ಕೆಳಕ್ಕಿಳಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಇದು ಕಾಳಿಂಗ ಸರ್ಪವೆಂಬುದು ಗೊತ್ತಾಗಿದೆ.
ಕಾರ್ಯಾಚರಣೆ ವೇಳೆ ಕ್ಷಣಮಾತ್ರದಲ್ಲೇ ಕಾಳಿಂಗ ಪವನ್ ಮೇಲೆರಗಿದ್ದು, ಹಾವು ಸಂರಕ್ಷಣಾ ಕಾರ್ಯಾಚರಣೆಯನ್ನ ನೋಡುತ್ತಿದ್ದ ಗ್ರಾಮಸ್ಥರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ತಕ್ಷಣವೇ ಹಿಂದೆ ಸರಿದಿದ್ದರಿಂದಾಗಿ ಪವನ್ ಅಪಾಯದಿಂದ ಬಚಾವಾಗಿದ್ದಾರೆ. ನಂತರ ಕಾಳಿಂಗವನ್ನ ಹಿಡಿದು ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: ಬಲೆಯಲ್ಲಿ ಸಿಲುಕಿ ನರಳುತ್ತಿದ್ದ ಬೃಹತ್ ಗಾತ್ರದ 'ಕಾಳಿಂಗ ಸರ್ಪ' ರಕ್ಷಣೆ