ಕಾರವಾರ: ಗಂಡನ ಕೊಲೆಗಾಗಿ ಸ್ನೇಹಿತೆಯ ಮೂಲಕ ಸುಪಾರಿ ಕೊಟ್ಟಿದ್ದ ಹೆಂಡತಿ ಹಾಗೂ ಕೊಲೆಗೆ ಯತ್ನಿಸಿದ ಆರೋಪಿ ಸೇರಿ ಇಬ್ಬರನ್ನು ಬಂಧಿಸಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ದಾಂಡೇಲಿಯ ಗಾಂವಠಾಣ ನಿವಾಸಿ ತೇಜಸ್ವಿನಿ ಅಂಕುಶ್ ಸುತಾರ ಹಾಗೂ ಬೆಳಗಾವಿಯ ನಂದಗಡದ ಗಣೇಶ ಶಾಂತಾರಾಮ ಪಾಟೀಲ್ ಬಂಧಿತ ಆರೋಪಿಗಳು. ತೇಜಸ್ವಿನಿ ತನ್ನ ಗಂಡ ಅಂಕುಶ್ ರಾಮ ಸುತಾರ ಕೊಲೆಗಾಗಿ ಬೆಳಗಾವಿಯಲ್ಲಿದ್ದ ತನ್ನ ಸ್ನೇಹಿತೆಯನ್ನು ಸಂಪರ್ಕಿಸಿದ್ದಾಳೆ. ಪತಿಯ ಕೊಲೆ ಮಾಡಿದರೆ 30 ಸಾವಿರ ರೂ. ಹಣ ನೀಡುತ್ತೇನೆ. ಯಾರನ್ನಾದರೂ ಗೊತ್ತು ಮಾಡಿ ಕಳುಹಿಸು ಎಂದು ತಿಳಿಸಿದ್ದಾಳೆ. ಅಲ್ಲದೆ ಕೆಲಸ ಮುಗಿದ ನಂತರ ಹಣ ನೀಡುವುದಾಗಿ ತಿಳಿಸಿದ್ದಳು ಎನ್ನಲಾಗಿದೆ.
ಅಂಕುಶ್ನನ್ನು ಕೊಲೆ ಮಾಡಲು ಮತ್ತೊಬ್ಬನೊಡನೆ ಮನೆಗೆ ಬಂದಿದ್ದ ಗಣೇಶ ಶಾಂತಾರಾಮ ಪಾಟೀಲ್ ಕತ್ತು ಹಿಸುಕಿ ಕೊಲೆಗೆ ಪ್ರಯತ್ನಿಸಿದ್ದಾನೆ. ಈ ವೇಳೆ ಅಂಕುಶ್ ಜೋರಾಗಿ ಕೂಗಿಕೊಂಡಿದ್ದಾನೆ. ಕೂಗಿದ ಧ್ವನಿ ಕೇಳಿ ಅಕ್ಕಪಕ್ಕದ ಮನೆಯವರು ಏನಾಯಿತು ಎಂದು ನೋಡಲು ಬಂದಾಗ ವಿಷಯ ಬೆಳಕಿಗೆ ಬಂದಿದೆ.
ಇವರನ್ನು ಕಂಡ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗ್ರಾಮದ ಹೊರವಲಯದ ಬಳಿ ಪೊಲೀಸರು ಗಣೇಶ ಪಾಟೀಲನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ತೇಜಸ್ವಿನಿಯ ಗೆಳತಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಡಿವೈಎಸ್‌ಪಿ ಕೆ.ಎಲ್. ಗಣೇಶ, ಸಿಪಿಐ ಪ್ರಭು ಆರ್. ಗಂಗನಹಳ್ಳಿ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಐ.ಆರ್.ಗಡ್ಡಕರ್, ಎಎಸ್ಐ ವೆಂಕಟೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂಬಂಧ ಗಾಂವಠಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.