ಕಾರವಾರ (ಉ.ಕ): ಅತಿ ಹೆಚ್ಚು ಅರಣ್ಯ ಪ್ರದೇಶವನ್ನೊಳಗೊಂಡಿರುವ ಜಿಲ್ಲೆಯಲ್ಲಿ ಮಳೆ ಕೂಡ ಹೆಚ್ಚು. ಈ ಕಾರಣದಿಂದಲೇ ಸಮುದ್ರ ಕೊರೆತ, ನೆರೆ ಹಾವಳಿ, ಭೂಕುಸಿತದಂಥ ಪ್ರಕೃತಿ ವಿಕೋಪಗಳು ಸಂಭವಿಸಿ ಇಲ್ಲಿನ ಜನರ ರಕ್ಷಣೆಯೇ ದೊಡ್ಡ ಸವಾಲಾಗಿ ಬಿಡುತ್ತದೆ.
ಆದರೆ ಇಂತಹ ಸಮಸ್ಯೆಯನ್ನು ತಕ್ಷಣ ಪತ್ತೆಹಚ್ಚಿ ಕಾರ್ಯಾಚರಣೆಗೆ ನೆರವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಹೊಸ ತಯಾರಿ ಮಾಡಿಕೊಂಡಿದೆ. ಇದಕ್ಕಾಗಿ ಡ್ರೋನ್ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದೆ. ಮಳೆಗಾಲದ ಸಮಯದಲ್ಲಿ ಅಥವಾ ಚಂಡಮಾರುತದ ಇಫೆಕ್ಟ್‌ನಿಂದಾಗಿ ನೆರೆ ಕಾಟ, ಸಮುದ್ರದ ಅಲೆಗಳಲ್ಲಿ ರೌದ್ರಾವತಾರ ಕಾಣಿಸಿಕೊಳ್ಳುತ್ತವೆ. ಇಲ್ಲವೇ, ಗುಡ್ಡ ಕುಸಿತ, ಭೂ ಕುಸಿತ, ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಎಲ್ಲಾದರೂ ಜನರು ಸಿಲುಕಿದ್ದಾರೋ, ಪ್ರಾಣಿಗಳು ಸಿಲುಕಿವೆಯೋ ಅಥವಾ ಕಾಡುಗಳ ರಕ್ಷಣೆ ಹೇಗೆ ಸಾಧ್ಯ ಅನ್ನೋ ಸವಾಲುಗಳು ಎದುರಾಗುತ್ತವೆ.
ಈ ಸವಾಲಿಗೆ ಉತ್ತರ ನೀಡುವುದೊಂದಿಗೆ ತುರ್ತು ಕ್ರಮ ಕೈಗೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಡ್ರೋನ್ ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ. ವಿಪತ್ತು ನಿರ್ವಹಣಾ ನಿಧಿ (ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಫಂಡ್)ಯಿಂದ ಡ್ರೋನ್ ಖರೀದಿಗಾಗಿ ಪೊಲೀಸ್ ಇಲಾಖೆಗೆ ಫಂಡ್ ನೀಡಿದ್ದು, ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಡ್ರೋನ್ ಅನ್ನು ಐಡಿಯಾ ಫೋರ್ಜ್ ಕಂಪನಿಯಿಂದ ಖರೀದಿಸಲಾಗಿದೆ.
ಈ ಡ್ರೋನ್ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಸುಮಾರು 3 ಕಿಮೀ ವರೆಗೆ ಸಾಗುತ್ತದೆ. ಅಲ್ಲದೇ ಸುಮಾರು 1 ಕಿಮೀ ದೂರದವರೆಗಿನ ವಸ್ತುವಿನ ಚಿತ್ರವನ್ನು ಕೂಡಾ ಈ ಡ್ರೋನ್ ಸ್ಪಷ್ಟವಾಗಿ ಸೆರೆ ಹಿಡಿಯುತ್ತದೆ.
ಇದರಲ್ಲಿ ಆಟೋ ಪೈಲಟ್ ವ್ಯವಸ್ಥೆಯಿದ್ದು, ಒಂದು ವೇಳೆ ಗಾಳಿ ವೇಗ ಜಾಸ್ತಿ ಇದ್ದರೆ ಅಥವಾ ಬ್ಯಾಟರಿ ಕಡಿಮೆ ಆದರೆ ಡ್ರೋನ್ ಆಪರೇಟರ್ ಬಳಿಯೇ ಬಂದು ಸೇರಿಕೊಳ್ಳುತ್ತದೆ. ಇನ್ನು ಎದುರಲ್ಲಿ ಹಕ್ಕಿಗಳು ಬಂದಲ್ಲಿ ಅದೇ ಅವುಗಳನ್ನು ಡಿಟಕ್ಟ್ ಮಾಡಿ ಪಕ್ಕಕ್ಕೆ ಸರಿಯುತ್ತದೆ. ಈ ಆಧುನಿಕ ಡ್ರೋನ್ ಅನ್ನು ಪೊಲೀಸ್ ಇಲಾಖೆ ಖರೀದಿಸಿದ್ದು, ಸಿವಿಲ್, ಡಿಎಆರ್, ವೈರ್‌ಲೆಸ್ ಸೇರಿ ಇಲಾಖೆಯ 6 ಮಂದಿಗೆ ಇದರ ತರಬೇತಿ ನೀಡಲಾಗಿದೆ.
ಜಿಲ್ಲೆಯಲ್ಲಿ ಕ್ಲಿಷ್ಟಕರ ಸನ್ನಿವೇಶಗಳು ಎದುರಾದಾಗ ಹಾಗೂ ಹಲವು ಕಾರ್ಯಾಚರಣೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಡ್ರೋನ್ ತಂತ್ರಜ್ಞಾನ ಮೊರೆ ಹೋಗಿರುವುದು ಉತ್ತಮ ಬೆಳವಣಿಗೆ. ಇದರಿಂದ ಬಹುಬೇಗ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಿದೆ ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.