ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೆ ಆ್ಯಂಬುಲೆನ್ಸ್ ಕೊರತೆ ಎದುರಾಗಿತ್ತು. ಅದರಲ್ಲಿಯೂ ಇಡೀ ಜಿಲ್ಲೆಯಲ್ಲಿ ಎಲ್ಲಿಯೂ ವೆಂಟಿಲೇಟರ್ ಆ್ಯಂಬುಲೆನ್ಸ್ಗಳಿಲ್ಲದೆ ಅದೆಷ್ಟೋ ಮಂದಿ ಪಡಬಾರದ ಕಷ್ಟ ಅನುಭವಿಸಿದ್ದರು.
ಆದರೆ, ಇದೀಗ ಶಾಸಕಿ ರೂಪಾಲಿ ನಾಯ್ಕ್ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 2 ಎರಡು ವೆಂಟಿಲೇಟರ್ ಹಾಗೂ ಇನ್ನೆರಡು ಆಕ್ಸಿಜನ್ ಆ್ಯಂಬುಲೆನ್ಸ್‌ಗಳನ್ನು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪಾಸಿಟಿವಿಟಿ ಇರುವ ಜಿಲ್ಲೆ. ನಿತ್ಯ ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗುತ್ತಿವೆ.
ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುವ ಹಿನ್ನೆಲೆ ಬಹುತೇಕ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ.
ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ಮೆಡಿಕಲ್ ಕಾಲೇಜಿನ ಕೊರೊನಾ ವಾರ್ಡ್ ಸದ್ಯ ಇಡೀ ಜಿಲ್ಲೆಯಲ್ಲಿ ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸ್ಥಳವಾಗಿದೆ.
ಜಿಲ್ಲೆಯಲ್ಲಿ ಸೋಂಕಿತರನ್ನ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಬರುವ ಇಲ್ಲವೇ ಸರ್ಕಾರಿ ಆಸ್ಪತ್ರೆಯಲ್ಲಿ ಗಂಭೀರವಾದವರನ್ನು ನೆರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಲು ಆ್ಯಂಬುಲೆನ್ಸ್ಗಳ ಕೊರತೆಯಿತ್ತು.
ಇಡೀ ಜಿಲ್ಲೆಯಲ್ಲಿ ಒಂದೇ ಒಂದು ವೆಂಟಿಲೇಟರ್ ಆ್ಯಂಬುಲೆನ್ಸ್ ಕೂಡ ಇರಲಿಲ್ಲ. ಒಂದೊಮ್ಮೆ ರೋಗಿಗಗಳನ್ನು ಕರೆದುಕೊಂಡು ಹೋಗಬೇಕೆಂದಾಗ ನೆರೆಯ ಗೋವಾ ಇಲ್ಲವೇ ಮಂಗಳೂರು, ಉಡುಪಿಯಿಂದ ಎರಡ್ಮೂರು ಪಟ್ಟು ಹಣ ಕೊಟ್ಟು ತರಿಸಬೇಕಾದ ಅನಿವಾರ್ಯತೆ ಇತ್ತು.
ಕೊರೊನಾ ಮೊದಲ ಅಲೆ ವೇಳೆ ಆ್ಯಂಬುಲೆನ್ಸ್ ಸಮಸ್ಯೆ ಬಗ್ಗೆ ತಿಳಿದ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಸೇರಿ ಇತರೆ ಶಾಸಕರು ತಮ್ಮ ಶಾಸಕರ ನಿಧಿ ಅನುದಾನದಲ್ಲಿ ಒಂದು ಆ್ಯಂಬುಲೆನ್ಸ್ ಖರೀದಿಸಲು ನಿರ್ಧರಿಸಿದ್ದರು. ಆದರೆ, ತಾಂತ್ರಿಕ ಕಾರಣದಿಂದ ಇದು ಸಾಧ್ಯವಾಗಿರಲಿಲ್ಲ.
ಈ ಬಾರಿ ಇಂತಹ ಸಮಸ್ಯೆ ಎದರಾಗದಂತೆ ಶಾಸಕರು ಆಸಕ್ತಿವಹಿಸಿ ತಮ್ಮ ಶಾಸಕರ ನಿಧಿ ಅನುದಾನವನ್ನು ಬಳಸಿ ತಕ್ಷಣ ನಾಲ್ಕು ಆ್ಯಂಬುಲೆನ್ಸ್‌ಗಳನ್ನು ತರಿಸುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.
ತಲಾ 20 ಲಕ್ಷ ರೂ. ವೆಚ್ಚದಲ್ಲಿ 4 ಆ್ಯಂಬುಲೆನ್ಸ್ಗಳನ್ನ ಖರೀದಿಸಲಾಗಿದೆ. ಎರಡು ಸಾಧಾ ಆಕ್ಸಿಜನ್ ಆ್ಯಂಬುಲೆನ್ಸ್‌ಗಳಾಗಿದ್ದರೆ, ಇನ್ನೆರೆಡು ವೆಂಟಿಲೇಟರ್ ಆ್ಯಂಬುಲೆನ್ಸ್ಗಳಾಗಿವೆ. ವೆಂಟಿಲೇಟರ್ ಇರುವ ಎರಡು ಆ್ಯಂಬುಲೆನ್ಸ್ಗಳಿಗೆ ₹10 ಲಕ್ಷ ಹೆಚ್ಚುವರಿ ಖರ್ಚು ಮಾಡಲಾಗಿದೆ.
ಈ ಆ್ಯಂಬುಲೆನ್ಸ್ಗಳು ಜನರಿಗೆ ಸಹಕಾರಿಯಾಗಲಿವೆ. ಇಂದು ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೂಲಕ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.
ಕಾರವಾರ ಜಿಲ್ಲಾಸ್ಪತ್ರೆ ಹಾಗೂ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಆ್ಯಂಬುಲೆನ್ಸ್‌ಗಳನ್ನು ಇಡಲು ತೀರ್ಮಾನಿಸಲಾಗಿದೆ. ಅಂಕೋಲಾ ತಾಲೂಕಿನ ರಾಮನಗುಳಿ ಹಾಗೂ ಕಾರವಾರ ತಾಲೂಕಿನ ಮಲ್ಲಾಪುರ ಭಾಗಕ್ಕೆ ತಲಾ ಒಂದೊಂದು ಆಕ್ಸಿಜನ್ ಆ್ಯಂಬುಲೆನ್ಸ್‌ಗಳನ್ನು ನೀಡಲಾಗಿದೆ.
ಇವುಗಳ ನಿರ್ವಹಣೆಯನ್ನು ಆರೋಗ್ಯ ಇಲಾಖೆಯೇ ಮಾಡಲಿದೆ. ಆ್ಯಂಬುಲೆನ್ಸ್ಳಿಗೆ ಬೇಕಾದ ಸಿಬ್ಬಂದಿಯನ್ನು ಸದ್ಯದಲ್ಲಿಯೇ ನೇಮಕ ಮಾಡುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಶರದ್ ನಾಯ್ಕ ತಿಳಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಸೂಕ್ತ ಆ್ಯಂಬುಲೆನ್ಸ್ ಸಿಗದೆ ಪರಾದಾಟ ನಡೆಸುತ್ತಿದ್ದ ಜನರ ಕೂಗನ್ನು ಆಲಿಸಿ ತಕ್ಷಣ ಸ್ಪಂದಿಸಿದ ಶಾಸಕಿ ರೂಪಾಲಿ ನಾಯ್ಕ ಕಾರ್ಯ ಮೆಚ್ಚುವಂತದ್ದಾಗಿದೆ.