ಕಾರವಾರ : ಸದಾ ಸ್ವಚ್ಛತೆಯ ಪಾಠ ಹೇಳುವ ಕ್ರಿಮ್ಸ್ ಆಸ್ಪತ್ರೆ ಇದೀಗ ಮಳೆ ನೀರು ಶೇಖರಣೆಗೊಂಡು ಮಲೇರಿಯಾ, ಡೆಂಘೀ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.
ನಗರದ ಕ್ರಿಮ್ಸ್ ಆಸ್ಪತ್ರೆಯ ನೆಲಮಹಡಿಯಲ್ಲಿ ಸೋರಿಕೆಯಾದ ಮಳೆ ನೀರು ಶೇಖರಣೆಗೊಂಡು ಸಂಪೂರ್ಣ ಮಲಿನಗೊಂಡಿದೆ. ಹಲವು ದಿನಗಳಿಂದ ಶೇಖರಣೆಗೊಂಡ ಕಾರಣ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಲೇರಿಯಾ, ಡೆಂಘೀಯಂತಹ ಮಾರಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.
ಇದೇ ಹಾದಿಯಲ್ಲಿ ನಿತ್ಯ ಹತ್ತಾರು ವೈದ್ಯರು, ಆರೋಗ್ಯ ಸಿಬ್ಬಂದಿ ಓಡಾಡಿದರು ಕೂಡ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ನಿತ್ಯ ವ್ಯಾಕ್ಸಿನ್ ಪಡೆಯಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದು, ಎಲ್ಲರಿಗೂ ವ್ಯಾಕ್ಸಿನ್ ಜೊತೆ ಸೊಳ್ಳೆಗಳಿಂದಲೂ ಕಚ್ಚಿಸಿಕೊಳ್ಳುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಕ್ರಿಮ್ಸ್ ನಿರ್ದೇಶಕ ಗಜಾನನ ನಾಯಕ್ ಬಳಿ ಕೇಳಿದ್ರೆ, ಕಟ್ಟಡ ಕಾಮಗಾರಿ ನಡೆಯುತ್ತಿರುವ ಕಾರಣ ಈ ರೀತಿ ಆಗಿದೆ. ಈ ಬಗ್ಗೆ ಗಮನಕ್ಕೆ ಇರಲಿಲ್ಲ. ಆದರೆ, ತಕ್ಷಣ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.