ಕಾರವಾರ: ಮಳೆಯ ರೌದ್ರಾವತಾರಕ್ಕೆ ಮುಳುಗಡೆಯಾಗಿದ್ದ ಗ್ರಾಮಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಆದರೆ ಹಲವೆಡೆ ಹತ್ತಾರು ವರ್ಷಗಳಿಂದ ದುಡಿದು ಕಟ್ಟಿಕೊಂಡಿದ್ದ ಮನೆ, ಅಗತ್ಯ ವಸ್ತುಗಳು ನೀರುಪಾಲಾಗಿದ್ದು, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿದ ಅವಾಂತರ ಲೆಕ್ಕ ಹಾಕಲೂ ಸಾಧ್ಯವಾಗುತ್ತಿಲ್ಲ. ಆರೇಳು ದಿನಗಳ ಕಾಲ ಮುಳುಗಡೆಯಾಗಿದ್ದಂತಹ ಮನೆಗಳಲ್ಲಿನ ನೀರು ಈಗ ಸಂಪೂರ್ಣ ಇಳಿದಿದ್ದು, ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ಕಣ್ಣೀರು, ಮೌನ ಬಿಟ್ಟು ಬೇರೇನು ಸಿಗದ ಹಾಗಾಗಿದೆ. ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿಯೂ ಇದೇ ಸ್ಥಿತಿ ಇದ್ದು, ಇಲ್ಲಿ ಮುಳುಗಡೆಯಾಗಿದ್ದ ಸುಮಾರು 400 ಮನೆಗಳಲ್ಲಿ ಇದೀಗ ನೀರು ಸಂಪೂರ್ಣ ಇಳಿಕೆಯಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿದ್ದ ಜನರು ಮನೆಗಳತ್ತ ಧಾವಿಸಿದ್ದು, ಕಳೆದೆರಡು ದಿನಗಳಿಂದ ಮನೆಯನ್ನು ಸ್ವಚ್ಛ ಮಾಡುವಲ್ಲಿ ನಿರತರಾಗಿದ್ದಾರೆ.
ಮನೆಯಲ್ಲಿದ್ದ ಬಟ್ಟೆ, ಅಕ್ಕಿ, ಬೆಳೆ, ಇತರೆ ಸಾಮಾನುಗಳು, ಕಾಗದ ಪತ್ರ ಎಲ್ಲವೂ ನೀರಾಗಿವೆ. ಇದರಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳೂ ಕಸವಾಗಿ ಮಾರ್ಪಟ್ಟಿದ್ದು, ಇವುಗಳನ್ನು ಸ್ವಚ್ಛ ಮಾಡುವುದೇ ದೊಡ್ಡ ತಲೆನೋವಾಗಿದೆ. ಅಲ್ಲದೆ ನೀರು ನಿಂತಿದ್ದರಿಂದ ಗಬ್ಬು ವಾಸನೆ ಬರುತ್ತಿದ್ದು, ಮನೆಗಳಿಗೆ ತೆರಳಲಾಗದ ಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರಾದ ಸೂರಜ್.
ಮೊದಲೇ ಮಾಹಿತಿ ನೀಡಿದ್ದರೆ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದೆವು:
ಇನ್ನು ಕಳೆದ ಹತ್ತಾರು ವರ್ಷಗಳಿಂದ ಕಷ್ಟಪಟ್ಟು ದುಡಿದು ತಂದ ಟಿವಿ, ಫ್ರಿಡ್ಜ್, ಬಟ್ಟೆ, ಬೈಕ್ ಎಲ್ಲವೂ ಹಾಳಾಗಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ನಾವೇ ಸ್ವತಃ ಬೆಳೆದು ಮಳೆಗಾಲ, ಬೇಸಿಗೆಗೆಂದು ಮಾಡಿಟ್ಟ ಎರಡು ವರ್ಷಕ್ಕಾಗುವಷ್ಟು ಅಕ್ಕಿ ಸಂಪೂರ್ಣ ನೀರಾಗಿದೆ. ಕಷ್ಟಪಟ್ಟು ಹೆಂಡತಿ ಮಕ್ಕಳು ಸೇರಿ ದುಡಿದ ದುಡಿಮೆಯೆಲ್ಲ ಮಳೆಗೆ ನೀರುಪಾಲಾಗಿದೆ. ಮೊದಲೇ ಮಾಹಿತಿ ನೀಡಿದ್ದರೆ ಎಲ್ಲವನ್ನೂ ಬೇರೆಡೆ ಸ್ಥಳಾಂತರಿಸಿಕೊಳ್ಳುತ್ತಿದ್ದೆವು. ಇದೀಗ ಮನೆಯ ಸ್ಥಿತಿ ನೋಡಿದರೆ ಮುಂದೇನು ಎಂಬುದು ತಿಳಿಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ಆನಂದು ಕೆ. ಕೊಠಾರಕರ್.
ಇನ್ನು ಇಲ್ಲಿನ ಅಂಬೇಜೂಗ ಶಾಲೆ ಸಂಪೂರ್ಣ ಮುಳುಗಡೆಯಾಗಿದ್ದ ಕಾರಣ ಮಕ್ಕಳ ಪಠ್ಯ ಪುಸ್ತಕ, ಶಾಲಾ ದಾಖಲಾತಿ ಎಲ್ಲವೂ ನೀರಿನಲ್ಲಿ ಮುಳುಗಿ ಹಾನಿಯಾಗಿದೆ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಅಲ್ಲದೆ ಶಾಲೆಯಲ್ಲಿಯೂ ನೀರು ತುಂಬಿದ್ದರಿಂದ ವಾಸನೆ ಬರುತ್ತಿದ್ದು, ಮಕ್ಕಳು ತರಗತಿಗಳಲ್ಲಿ ಕುಳಿತುಕೊಳ್ಳಲಾಗದ ಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.