ಕಾರವಾರ: ಕುಟುಂಬ ಕಲಹವು ಆತನಿಂದ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ದೂರಮಾಡಿತ್ತು. ಕೆಲ ವರ್ಷದ ಬಳಿಕ ಇಬ್ಬರೂ ಗಂಡು ಮಕ್ಕಳು ಅಪ್ಪನ ಬಳಿ ವಾಪಸ್ ಬಂದಿದ್ದರು. ಆದರೆ ಇದೀಗ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಗನೆಂದು ಮತ್ತೋರ್ವ ಬಂದಿದ್ದು, ವೃದ್ಧ ತಂದೆಗೆ ಈಗ ಅಸಲಿ ಮಕ್ಕಳಾರು ಎಂಬುದೇ ಗುರುತಿಸಲಾಗುತ್ತಿಲ್ಲ.
ಅಂಕೋಲಾ ತಾಲೂಕಿನ ಕೇಣಿ ಗ್ರಾಮದ ವೆಂಕಟರಮಣ ನಾಯ್ಕ ಹಾಗೂ ಶೋಭಾ ದಂಪತಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ಹಲವು ವರ್ಷಗಳ ಹಿಂದೆ ಗಂಡ-ಹೆಂಡತಿ ನಡುವೆ ಕಲಹ ಉಂಟಾಗಿ ಪತ್ನಿ ಶೋಭಾ, ತನ್ನ ನಾಲ್ವರು ಮಕ್ಕಳೊಂದಿಗೆ ಹುಬ್ಬಳ್ಳಿಗೆ ತೆರಳಿದ್ದರು. ಬಳಿಕ ಪತ್ನಿ ಹಾಗೂ ಮಕ್ಕಳಿಗಾಗಿ ವೆಂಕಟರಮಣ ಹುಡುಕಿದ್ದರಾದರೂ ಸಿಕ್ಕಿರಲಿಲ್ಲ. ಆದರೆ ಕೆಲ ವರ್ಷದ ಬಳಿಕ ಮೊದಲ ಮಗ ಸುರೇಶ ವಾಪಸ್ ಆಗಿ ತಂದೆಯೊಟ್ಟಿಗೆ ಇದ್ದನು. ಕೆಲ ವರ್ಷಗಳ ಬಳಿಕ ಎರಡನೇ ಮಗ ಮಂಜುನಾಥ ಕೂಡ ಬಂದು ತಂದೆಯ ಜೊತೆ ಉಳಿದುಕೊಂಡಿದ್ದನು. ಆದರೆ ಈಗ ಈ ಕಥೆಗೆ ರೋಚಕ ತಿರುವು ಸಿಕ್ಕಿದೆ.
ಹೌದು.., ಇದೀಗ ವಾರದ ಹಿಂದೆ ಇಬ್ಬರು ಸಹೋದರಿಯರ ಜೊತೆ ಹುಬ್ಬಳ್ಳಿಯಿಂದ ಬಂದ ಮಗನೋರ್ವ ನಾನು ಮಹಮ್ಮದ್, ನನ್ನ ತಂದೆ ವೆಂಕಟರಮಣ. ತಾಯಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರಿಂದ ನನ್ನ ಹೆಸರನ್ನು ಮಹಮದ್ ಎಂದು ಇಟ್ಟಿದ್ದಾರೆಂದು ಹೇಳಿದ್ದಾನೆ. ಅಲ್ಲದೇ ಕೆಲ ದಾಖಲೆಗಳನ್ನು ತೋರಿಸಿ, ತಾನು 10 ವರ್ಷದ ಹುಡುಗನಿದ್ದಾಗ ಅಮ್ಮ ತನ್ನನ್ನು ಕರೆದುಕೊಂಡು ಹೋಗಿರುವುದಾಗಿ ಹೇಳಿ, ಬಾಲ್ಯದಲ್ಲಿ ಕಳೆದ ದಿನಗಳನ್ನು ಬಿಚ್ಚಿಟ್ಟಿದ್ದಾನೆ. ನಾನು ಇಲ್ಲಿಗೆ ಆಸ್ತಿಗಾಗಿ ಬಂದಿಲ್ಲ, ನಾನು ಮಗ ಎಂಬುದನ್ನು ಹೇಗೆ ಬೇಕಾದರೂ ಸಾಬಿತುಪಡಿಸುತ್ತೇನೆ. ಆದರೆ ಅಸಲಿ ಸತ್ಯ ಹೊರಬರಬೇಕು ಎನ್ನುತ್ತಾರೆ ಹುಬ್ಬಳ್ಳಿಯಿಂದ ಬಂದ ಮಹಮ್ಮದ್. ಇದೀಗ ತಂದೆಗೆ ತನ್ನ ಮಕ್ಕಳಾರು ಎಂಬುದೇ ಗುರುತು ಹಿಡಿಯಲಾಗದ ಪರಿಸ್ಥಿತಿ ಎದುರಾಗಿದೆ.
ಇನ್ನು 15 ವರ್ಷದಿಂದ ಮನೆಯಲ್ಲಿದ್ದ ಎರಡನೇ ಮಗ ಎಂದು ಹೇಳುವ ಮಂಜು ಮೀನುಗಾರಿಕೆಗೆ ತೆರಳಿದ್ದು, ಇನ್ನು ವಾಪಸ್ ಆಗಿಲ್ಲ, ಆತ ಬಂದಾಗ ಅನುಮಾನ ಇತ್ತು. ಈ ಬಗ್ಗೆ ದೊಡ್ಡ ಮಗನ ಬಳಿಯೂ ಹೇಳಿದ್ದೆ. ಆದರೆ ಇದೀಗ ಬಂದಿರುವವರು ನನ್ನ ಮಕ್ಕಳು, ಮನೆಯಲ್ಲಿ ಇದ್ದವನು ನಕಲಿ ಮಗ ಎನ್ನುವುದು ತಂದೆ ವೆಂಕಟರಮಣ ನಾಯ್ಕರ ಅಭಿಪ್ರಾಯ.
ಕುಟುಂಬಲ್ಲಿ ಹೇಳಿಕೊಳ್ಳುವಂತಹ ಆಸ್ತಿ ಕೂಡ ಇಲ್ಲ, ಕೇವಲ ಮೂರು ಗುಂಟೆ ಮಾತ್ರ ಇದೆ. ಇಷ್ಟಾದರೂ ನಕಲಿಯಾಗಿ ಬಂದು ಸೇರಿರುವುದಾದರು ಯಾಕೆ ? ಹದಿನೈದು ವರ್ಷದಿಂದ ಮನೆಯಲ್ಲಿರುವವನೇ ನಕಲಿ ಮಗನೇ? ಆತ ಎರಡನೇ ಮಗ ಎಂದು ಹೇಳಿ ಇಲ್ಲಿಗೆ ಬಂದು ನೆಲೆಸಲು ಕಾರಣವಾದರೂ ಏನು ಎಂಬಿತ್ಯಾದಿ ಪ್ರಶ್ನೆಗಳು ತಂದೆಯನ್ನು ಗೊಂದಲಕ್ಕೆ ತಳ್ಳಿದ್ದು, ಊರಿಗೆ ಊರೇ ಈ ಘಟನೆಯನ್ನು ಕುತೂಹಲಕಾರಿಯಾಗಿ ನೋಡುವಂತಾಗಿದೆ. ಸದ್ಯ ವೆಂಕಟರಮಣ ಮನೆಯ ಹಿಂದೆ ಮೊದಲ ಮಗ ಸುರೇಶ್ ನೆಲೆಸಿದ್ದರೆ, ಮನೆಯ ಮುಂದೆ ಎರಡನೇ ಮಗ ಎಂದು ಬಂದ ಮಂಜು ಮನೆ ಕಟ್ಟಿಕೊಂಡು ನೆಲೆಸುತ್ತಿದ್ದಾನೆ. ಒಂದೊಮ್ಮೆ ಮಗ ಯಾರೆಂದು ತೀವ್ರ ಗೊಂದಲ ಉಂಟಾದರೆ ಡಿಎನ್ಎ ಪರೀಕ್ಷೆ ನಡೆಸಲಿ ಎನ್ನುವುದು ಇಬ್ಬರು ಮಕ್ಕಳ ಅಭಿಪ್ರಾಯ.