ಕಾರವಾರ: ಕೊರೊನಾ ಕರ್ಫ್ಯೂ ಪರಿಣಾಮ ಪ್ರಯಾಣಿಕರು ಬಾರದೆ ಬರಿಗೈಯಲ್ಲೇ ಆಟೋ ಚಾಲಕರು ಮನೆ ಸೇರುವ ಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ 15 ದಿನಗಳ ಕಾಲ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಕಾರವಾರದಲ್ಲಿ ಪ್ರಯಾಣಿಕರನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಆಟೋ ಚಾಲಕರ ಬದುಕು ದುಸ್ತರವಾಗಿದೆ. ಕೊರೊನಾ ಕರ್ಫ್ಯೂ ಹಾಗೂ ಸೋಂಕಿನ ಭಯದಿಂದಾಗಿ ಯಾರೊಬ್ಬರೂ ಆಟೋ ಹತ್ತುತ್ತಿಲ್ಲ. ಇದರಿಂದ ಪ್ರಯಾಣಿಕರು ಬಾರದೇ ದಿನದ ಕೂಲಿ ಸಹ ಹುಟ್ಟುತಿಲ್ಲ.
ಒಂದು ಆಟೋದಲ್ಲಿ ಮೂರು ಜನ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಸಂಚಾರ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇನ್ನು ಜಿಲ್ಲೆಯಲ್ಲಿ ಬಸ್ ಸಂಚಾರ ಬಂದ್ ಮಾಡಲಾಗಿದ್ದು, ಪ್ರವಾಸೋದ್ಯಮ ಸಹ ಬಂದ್ ಇದೆ. ಹೀಗಾಗಿ ಪ್ರಮುಖ ಗ್ರಾಹಕರಾಗಿರುವ ಪ್ರವಾಸಿಗರಾಗಲಿ, ಬಸ್ ಪ್ರಯಾಣಿಕರಾಗಲಿ ಇಲ್ಲದ ಕಾರಣ ಆಟೋ ಚಾಲಕರಿಗೆ ದಿನದ ಕೂಲಿ ಸಹ ಸಿಗುತ್ತಿಲ್ಲ. ಹೀಗಾಗಿ ಇದೇ ವೃತ್ತಿಯನ್ನ ನಂಬಿ ಬದುಕು ಕಟ್ಟಿಕೊಂಡ ಆಟೋ ಚಾಲಕರು ಇದೀಗ ಸಂಕಷ್ಟ ಅನುಭವಿಸುವಂತಾಗಿದೆ.