ಕಾರವಾರ : ಅದು ಕಾಣಿಸೋದಕ್ಕೆ ದೂರದ ಗ್ರಾಮವೊಂದರಲ್ಲಿ ಇರುವ ಸಣ್ಣದಾದ ಕೆರೆ. ಆದರೆ, ಈ ಕೆರೆಯಲ್ಲಿ ವಿದೇಶಿ ಅತಿಥಿಗಳದ್ದೇ ಕಾರುಬಾರು. ಹಚ್ಚಹಸಿರಿನ ಸುಂದರ ಪರಿಸರದ ನಡುವೆ ತುಂಬಿ ನಿಂತಿರುವ ಕೆರೆಯಲ್ಲಿ ಈಜಾಡುತ್ತಿರುವ ಬಣ್ಣ ಬಣ್ಣದ ಈ ವಿದೇಶಿ ಅತಿಥಿಗಳನ್ನ ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ವರ್ಷದ ಕೆಲವೇ ತಿಂಗಳು ಮಾತ್ರ ಆಗಮಿಸುವ ಇವರು ಇದೀಗ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದ್ದಾರೆ.
ಎಲ್ಲಿ ನೋಡಿದ್ರು ಕಪ್ಪು, ಬಿಳುಪು, ಕಂದು ಬಣ್ಣದಲ್ಲಿ ಕಂಗೊಳಿಸುತ್ತಿರುವ ಹಕ್ಕಿಗಳು. ಇನ್ನೊಂದೆಡೆ ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಈಜಾಡುತ್ತಿರುವ ವಿವಿಧ ಬಗೆಯ ಬಾತುಕೋಳಿಗಳು. ಮತ್ತೊಂದೆಡೆ, ಮರದಿಂದ ಮರಕ್ಕೆ ಆಹಾರ ಅರಸುತ್ತಾ ಹಾರಾಡುತ್ತಿರುವ ಹಕ್ಕಿಗಳ ಗುಂಪು. ಅಬ್ಬಾ ಈ ಹಕ್ಕಿಗಳ ಕಲರವವನ್ನ ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೆರವಡಿ ಗ್ರಾಮದ ಕೆರೆಗಳಲ್ಲಿ. ಈ ಗ್ರಾಮದ ಕೆರೆಗೆ ಇದೀಗ ಸಾವಿರಾರು ಸಂಖ್ಯೆಯಲ್ಲಿ ಸೂಜಿ ಬಾಲದ ಬಾತುಗಳು ವಲಸೆ ಬಂದಿದ್ದು, ಪಕ್ಷಿ ಪ್ರೇಮಿಗಳನ್ನ ಆಕರ್ಷಿಸುತ್ತಿದೆ.
ನಾರ್ದರ್ನ್ ಪಿನ್‌ಟೇಲ್ ಎಂದು ಕರೆಯಲಾಗುವ ಸೂಜಿ ಬಾಲದ ಬಾತುಕೋಳಿಗಳು ಮಧ್ಯ ಏಷ್ಯಾ, ಉತ್ತರ ಏಷ್ಯಾ, ಅಂಟಾರ್ಟಿಕಾದ ಪ್ಯಾಲಿಯಾಕ್ಟಿಕ್ ಪ್ರದೇಶಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಹಕ್ಕಿಗಳು ಜನವರಿ ತಿಂಗಳ ನಂತರ ಮಾರ್ಚ್, ಏಪ್ರಿಲ್‌ನಿಂದ ಜೂನ್, ಜುಲೈವರೆಗೂ ವಲಸೆ ಬರುತ್ತವೆ.
ಅವುಗಳು ಮೊಟ್ಟೆಯಿಟ್ಟು ಮರಿ ಮಾಡುವ ವೇಳೆಗೆ ವಲಸೆ ಪ್ರಕ್ರಿಯೆ ಆರಂಭವಾಗುತ್ತದೆ. ಹಚ್ಚ ಹಸಿರಿನ ಪ್ರದೇಶ, ನೀರಿನ ಸೌಲಭ್ಯ, ಹುಲ್ಲಿನ ಪ್ರದೇಶ ಇರುವ ಜಾಗ ಗುರುತಿಸಿ ಮೊಟ್ಟೆಗಳನ್ನ ಇಡುತ್ತವೆ. ಬಳಿಕ 20 ರಿಂದ 24 ದಿನಗಳಲ್ಲಿ ಮೊಟ್ಟೆಗಳಿಂದ ಮರಿಗಳು ಹೊರ ಬರುತ್ತವೆ. ಮರಿಗಳು ಕೊಂಚ ಬೆಳೆಯುವವರೆಗೂ ಇಲ್ಲಿಯೇ ವಾಸ ಮಾಡುವ ಇವು ಬಳಿಕ ತಮ್ಮ ಪ್ರದೇಶಕ್ಕೆ ವಾಪಸ್ ತೆರಳುತ್ತವೆ.
ಇನ್ನು ಪ್ರತಿ ವರ್ಷ ಚಳಿಗಾಲದ ಅವಧಿಯಲ್ಲಿ ಭಾರತದ ಹಲವು ಪ್ರದೇಶಗಳಿಗೆ ಈ ನಾರ್ದರ್ನ್ ಪಿನ್‌ಟೇಲ್ ಬಾತುಗಳು ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಬರುತ್ತವೆ. ಹೆಚ್ಚು ಜೌಗು ಪ್ರದೇಶದಲ್ಲಿ, ಪೊದೆಗಳು ಇರುವ ಸ್ಥಳಗಳನ್ನು ಹುಡುಕಿಕೊಂಡು ಬಂದು ಒಂದಷ್ಟು ತಿಂಗಳ ಕಾಲ ಇದ್ದು ಮರಳಿ ತಮ್ಮ ಸ್ಥಾನಕ್ಕೆ ತೆರಳುತ್ತವೆ.
ಈ ಬಾತುಗಳು ಸಾಮಾನ್ಯವಾಗಿ ಹುಲ್ಲಿನ ಮಧ್ಯೆ ಇರುವ ಕ್ರಿಮಿ-ಕೀಟಗಳು, ಜಲಮೂಲಗಳಲ್ಲಿರುವ ಜೀವಿಗಳನ್ನ ತಿಂದು ಬದುಕುತ್ತವೆ. ಈ ಬಾತುಗಳ ಮರಿಗಳು ಮೊಟ್ಟೆಯೊಡೆದು ಹೊರಬಂದ ಕೆಲವೇ ಗಂಟೆಗಳಲ್ಲಿ ತಮ್ಮ ತಾಯಿಯನ್ನ ಅನುಸರಿಸಿಕೊಂಡು ಹೋಗುವ ಸಾಮರ್ಥ್ಯ ಪಡೆದುಕೊಳ್ಳುತ್ತವೆ. ಪ್ರತಿವರ್ಷ ಸಾವಿರಾರು ಕಿಲೋಮೀಟರ್ ವಲಸೆ ಬಂದು ಮತ್ತೆ ತಮ್ಮದೇ ಸ್ಥಾನಕ್ಕೆ ಮರಳಿ ಹೋಗುತ್ತವೆ.
ಈ ಪಕ್ಷಿಗಳು ತಮ್ಮದೇ ಗುಂಪುಗಳೊಂದಿಗೆ ವಲಸೆ ಬಂದರೂ ಇಲ್ಲಿನ ಬಾತುಕೋಳಿಗಳೊಂದಿಗೂ ಬೆರೆತು ಇದ್ದು ವಾಪಸ್ಸಾಗುತ್ತವೆ. ಪಕ್ಷಿಗಳ ಕಲರವ, ತುಂಟಾಟ ನೋಡಲು ಸಾಕಷ್ಟು ಮಂದಿ ಪಕ್ಷಿ ಪ್ರೇಮಿಗಳು ಈ ಪ್ರದೇಶಕ್ಕೆ ಆಗಮಿಸುತ್ತಾರಾದರೂ ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿಯಿಲ್ಲ. ಹೀಗಾಗಿ, ಈ ಪ್ರದೇಶವನ್ನ ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಿದಲ್ಲಿ ಪಕ್ಷಿಗಳ ಕುರಿತು ಅಧ್ಯಯನ ನಡೆಸುವವರಿಗೆ ಅನುಕೂಲವಾಗುತ್ತದೆ ಅನ್ನೋದು ಸ್ಥಳೀಯರ ಅಭಿಪ್ರಾಯ.
ಇದನ್ನೂ ಓದಿ: ರಾಜ್ಯ ಸರ್ಕಾರದ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಘೋಷಣೆ