ಶಿರಸಿ/ಭಟ್ಕಳ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶಾಸಕ ಸುನೀಲ್ ನಾಯ್ಕ ಜಿಲ್ಲೆಯ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಶ್ರೀಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡಿಗರು ತಾನು ಕನ್ನಡಿಗ ಎಂದು ಹೆಮ್ಮೆಯಿಂದ ಎದೆ ಉಬ್ಬಿಸಿ ಹೇಳುವ ದಿನ. ರಾಜ್ಯೋತ್ಸವ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಪ್ರತಿದಿನ ಕನ್ನಡ ನಾಡು ನುಡಿಗಾಗಿ ಹೊರಾಡುವ ಮನಸ್ಥಿತಿ ನಮ್ಮದಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಹಾಯಕ ಆಯುಕ್ತ ಸಾಜಿದ ಅಹ್ಮದ ಮುಲ್ಲಾ ಅವರು, ಕನ್ನಡಕ್ಕಾಗಿ ಹೋರಾಡಿದ ಹಾಗೂ ಅಖಂಡ ಕರ್ನಾಟಕದ ರಚನೆಗೆ ಶ್ರಮಿಸಿದವರನ್ನೆಲ್ಲ ಸ್ಮರಿಸುವ ದಿನ ಇದಾಗಿದೆ. ಕೇವಲ ಇಂಗ್ಲಿಷ್ ಭಾಷೆಯೊಂದಿದ್ದರೆ ಬದುಕಲು ಸಾಧ್ಯ ಎಂಬ ತಪ್ಪು ಕಲ್ಪನೆಯನ್ನು ನಿರ್ಮೂಲನೆ ಮಾಡಿ, ಯಾವುದೇ ಭಾಷೆ ಕಲಿಯಿರಿ ಆದರೆ ಕನ್ನಡ ಭಾಷೆಯನ್ನು ಮರೆಯದಿರಿ ಎಂದು ಕರೆ ನೀಡಿದರು.
ನಂತರ ಕನ್ನಡ ನಾಡು ನುಡಿಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಉಪನ್ಯಾಸ ನೀಡಿದರು. ಇದೇ ಸಂಧರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸಿ ಸನ್ಮಾನಿಸಲಾಯಿತು. ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಳೆದ ವರ್ಷ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ 12 ವಿದ್ಯಾಥಿಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ ತಾಲೂಕು ಪ್ರಾಥಮಿಕ-ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ನಂತರ ದಿ ನ್ಯೂ ಇಂಗ್ಲಿಷ್ ಶಾಲೆಯಿಂದ ಮೆರವಣಿಗೆ ಸಾಗಿ ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಹೋರಾಟಗಾರರ ವೇಷಧಾರಿಯಲ್ಲಿ ಕಂಗೊಳಿಸಿದರು. ಜೊತೆಗೆ ಪ್ಲಾಸ್ಟಿಕ್ ನಿಷೇಧ ಅಭಿಯಾನದ ಟಾಬ್ಲೋಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.
ಶಿರಸಿಯಲ್ಲಿ ವಿಶೇಷ ಮೆರವಣಿಗೆ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿರಸಿಯಲ್ಲಿ ವಿಶೇಷ ಮೆರವಣಿಗೆ, ರೂಪಕಗಳ ಪ್ರದರ್ಶನ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಸೇರಿ ನಗರದ ವಿವಿಧ ಕಡೆಗಳಲ್ಲಿ 450 ಮೀಟರ್ ಉದ್ದದ ನಾಡ ಧ್ವಜವನ್ನು ಹಿಡಿದು 5 ಕಿ.ಮೀ ಗೂ ಅಧಿಕ ದೂರ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ಶಿರಸಿ ನಗರದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಸಲಾಯಿತು. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಬಸ್ಸಿಗೆ ವಿಶೇಷ ಅಲಂಕಾರ ಮಾಡಿ ರಾಜ್ಯೋತ್ಸವ ಶುಭಾಶಯ ಕೋರಿದರು.