ಕಾರವಾರ: ಸ್ನಾನದ ಕೋಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕಾರವಾರ ತಾಲೂಕಿನ ಕುರ್ನಿಪೇಟದಲ್ಲಿ ನಡೆದಿದೆ.
ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರ್ನಿಪೇಟದ ನಿವಾಸಿ 11 ವರ್ಷದ ಗಗನಾ ನಾಯ್ಕ ಮೃತಪಟ್ಟ ಬಾಲಕಿ. ಮಲ್ಲಾಪುರದ ಕೇಂದ್ರೀಯ ವಿದ್ಯಾಲಯದಲ್ಲಿ 6 ನೇ ತರಗತಿ ಕಲಿಯುತ್ತಿದ್ದಳು. ಎರಡು ದಿನದ ಹಿಂದೆ ತಮ್ಮ ಮನೆಯಲ್ಲಿ ಸ್ನಾನ ಗೃಹಕ್ಕೆ ತೆರಳಿದ್ದ ವೇಳೆ ಬಾಲಕಿ ಬಟ್ಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪೂರ್ತಿ ದೇಹ ಸುಟ್ಟಿತ್ತು. ವಿಷಯ ತಿಳಿದ ಕುಟುಂಬಸ್ಥರು ಬೆಂಕಿ ಆರಿಸಿವುದರೊಳಗಾಗಿ 80 ಪ್ರತಿಶತ ಸುಟ್ಟಗಾಯಗಳಾಗಿದ್ದವು. ತಕ್ಷಣ ಬಾಲಕಿಯನ್ನು ಕಾರವಾರದ ಕಿಮ್ಸ್ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿಯು ಗುರುವಾರ ಮೃತಪಟ್ಟಿದ್ದಾಳೆ.
ಓದುವುದರಲ್ಲಿ ಹಾಗೂ ಅಭಿನಯ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಚುರುಕಾಗಿದ್ದ ಬಾಲಕಿ ಮಲ್ಲಾಪುರ ಭಾಗದಲ್ಲಿ ಎಲ್ಲರ ಗಮನ ಸೆಳೆದಿದ್ದಳು. ಆದರೆ ಇದೀಗ ಬಾಲಕಿಯ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.