ಕಾರವಾರ: ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯನ್ನು ಸಂಸದ ಅನಂತ್ ಕುಮಾರ್ ಹೆಗಡೆ ಕಾರವಾರದಲ್ಲಿ ಇಂದು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜಿಲ್ಲೆಯಲ್ಲಿ ರಸ್ತೆ ಬದಿಯ ಗೂಡಂಗಡಿ ಸೇರಿದಂತೆ ಫಾಸ್ಟ್ ಪುಡ್ ಹೋಟೆಲ್ ಗಳಲ್ಲಿ ಅಜಿನೊಮೊಟೊ ರಾಸಾಯನಿಕವನ್ನು ಮಿತಿಮೀರಿ ಬಳಸಲಾಗುತ್ತಿದೆ. ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಜಿಲ್ಲೆಯ ಎಲ್ಲ ಕಡೆಯೂ ಅಜಿನೊಮೊಟೊ ಬಳಕೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಪ್ರತಿ ಎರಡು ವಾರಕ್ಕೊಮ್ಮೆಯಾದರು ಟಾಸ್ಕ್ ಪೋರ್ಸ್ ಕಮಿಟಿ ರಚಿಸಿಕೊಂಡು ಹೋಟೆಲ್ಗಳಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು.
ಇನ್ನು ವಿಕಲಚೇತನರ ಅಂಗವಿಕಲತೆ ಪ್ರಮಾಣ ಪತ್ರ ಪಡೆಯಲು ಜಿಲ್ಲಾ ಸರ್ಜನ್ ಬಳಿಯೇ ಬರಬೇಕಾದ ಸ್ಥಿತಿ ಇದ್ದು, ಕೆಲವು ವೇಳೆ ಸರ್ಜನ್ ಸಿಗದೇ ವಿಕಲ ಚೇತನರು ಪರದಾಡಬೇಕಾದ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಶಾಸಕಿ ರೂಪಾಲಿ ನಾಯ್ಕ್ ಸಚಿವರ ಗಮನಕ್ಕೆ ತಂದರು. ಅದರಂತೆ ಇದಕ್ಕೆ ಪರಿಹಾರಗಳ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಕೇಳಿದಾಗ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಟೆಲಿಕಾನ್ಪರೆನ್ಸ್ ವ್ಯವಸ್ಥೆ ಕಲ್ಪಿಸಿಕೊಂಡಲ್ಲಿ ಆಯಾ ತಾಲೂಕು ಆಸ್ಪತ್ರೆಗಳಲ್ಲಿಯೇ ನೀಡಬಹುದಾದ ಬಗ್ಗೆ ತಿಳಿಸಿದಾಗ ಸಂಸದರು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಲ್ಲದೆ ಹಳಿಯಾಳದಲ್ಲಿನ ಕೌಶಲ್ಯ ತರಬೇತಿ ಕೇಂದ್ರವನ್ನು ಶಿರಸಿ ಇಲ್ಲವೇ ಕರಾವಳಿ ಭಾಗಗಳಲ್ಲಿ ವಿಸ್ತರಿಸಲು ಕ್ರಮ ಕೈಗೊಳ್ಳುವ ಬಗ್ಗೆ, ಕುಡಿಯುವ ನೀರು ಕಾಮಗಾರಿಗಳು ಸಮರ್ಪಕವಾಗಿ ಮನೆಗಳಿಗೆ ಪೂರೈಕೆ ಮಾಡುವಂತೆ ಸೂಚನೆ ನೀಡಿದರು.