ಕಾರವಾರ: ಇಲ್ಲಿನ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮಂಜೂರಾಗಿರುವ ₹150 ಕೋಟಿ ಹಣ ಬಿಡುಗಡೆಗೂ ಮುನ್ನ ಅಲ್ಲಿನ ಭ್ರಷ್ಟ ಅಧಿಕಾರಿಗಳನ್ನು ತೆಗೆದುಹಾಕಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷಗಳಿಂದ ಪ್ರಾರಂಭವಾಗಿರುವ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಸಂಸ್ಥೆಯ ನಿರ್ದೇಶಕ ಶಿವಾನಂದ ದೊಡ್ಮನಿ ಅವರು ಮಹಾವಿದ್ಯಾಲಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯದೆ ಗುತ್ತಿಗೆ ನೀಡಿದ್ದಾರೆ. ಅಷ್ಟೇ ಅಲ್ಲ, ಕ್ಯಾಂಟೀನ್ ನಡೆಸಲು ಅವಕಾಶ, ಔಷಧಿ ಯಂತ್ರೋಪಕರಣ ಖರೀದಿಯಲ್ಲಿ ಅವ್ಯವಹಾರ, ಆಸ್ಪತ್ರೆ ಹೊರಗುತ್ತಿಗೆ ನೌಕರರ ನೇಮಕದಲ್ಲಿ ಹಸ್ತಕ್ಷೇಪ, ಅವಧಿ ಮುಗಿದರೂ ನಿರ್ದೇಶಕ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರ ಮಹಾವಿದ್ಯಾಲಯಕ್ಕೆ ₹150 ಕೋಟಿ ಘೋಷಿಸಿತ್ತು. ಇನ್ನೂ ಅನುದಾನ ಬಿಡುಗಡೆಗೊಂಡಿಲ್ಲ. ಅದಕ್ಕಾಗಿ ಶಾಸಕಿ ರೂಪಾಲಿ ನಾಯ್ಕ ಅವರು ಸಿಎಂ ಯಡಿಯೂರಪ್ಪನವರಿಗೆ ಅನುದಾನ ರಿಲೀಸ್ ಮಾಡಲು ಮನವಿ ಮಾಡಿದ್ದಾರೆ. ಆದರೆ, ಈ ಹಣ ಬಿಡುಗಡೆಗೂ ಮುನ್ನ ಮಹಾವಿದ್ಯಾಲಯದಲ್ಲಿರುವ ಭ್ರಷ್ಟರನ್ನು ತೆಗೆದು ಹಾಕಬೇಕು. ಆಗ ವಿದ್ಯಾಲಯಕ್ಕೆ ಲಾಭ ಲಭಿಸಲು ಸಾಧ್ಯ. ಇಲ್ಲವಾದಲ್ಲಿ ಮೊಸಳೆ ಬಾಯಿಗೆ ಮಾಂಸ ನೀಡಿದ ಸ್ಥಿತಿ ವೈದ್ಯಕೀಯ ಮಹಾವಿದ್ಯಾಲಯದ್ದಾಗಲಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಪ್ರಭಾವದಿಂದಾಗಿ ಭ್ರಷ್ಟಾಚಾರ ಅಧಿಕವಾಗಿದೆ. ಅದರಿಂದಾಗಿ ವಿದ್ಯಾಲಯಕ್ಕೆ ಮತ್ತೆ ಅನ್ಯಾಯವಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಒತ್ತಾಯಿಸಿದ್ದಾರೆ.