ಕಾರವಾರ: ರಾಜ್ಯದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜೋಯಿಡಾ ತಾಲೂಕಿನ ಜನರಿಗೆ ಈಗ ಒಕ್ಕಲೆಬ್ಬಿಸುವ ಭಯ ಕಾಡಲು ಪ್ರಾರಂಭವಾಗಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಜನರಿಗೆ ಪ್ಯಾಕೇಜ್ ನೀಡಿ ಎನ್‌ಜಿಒ ಒಂದರ ಮೂಲಕ ಒಕ್ಕಲೆಬ್ಬಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ಅರಣ್ಯ ಇಲಾಖೆಯ ಕ್ರಮದ ವಿರುದ್ದ ಸಾರ್ವಜನಿಕರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಜೋಯಿಡಾ ತಾಲೂಕಿನಲ್ಲಿ ಶೇಕಡಾ 87ರಷ್ಟು ಪ್ರದೇಶ ಅರಣ್ಯವೇ ಆಗಿದ್ದು ಕೇವಲ ಶೇಕಡಾ 13 ರಷ್ಟು ಜಾಗದಲ್ಲಿ ಜನರ ವಾಸಿಸುತ್ತಿದ್ದಾರೆ. ಇನ್ನು ಕಾಳಿ ಹುಲಿ ಸಂರಕ್ಷಿತ ಪ್ರದೇಶವಾಗಿರುವ ಜೋಯಿಡಾದಲ್ಲಿ ಸದ್ಯ ಜನರನ್ನ ಒಕ್ಕಲೆಬ್ಬಿಸುವ ಕಾರ್ಯ ನಡೆಯಲಾಗುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಡಿಗ್ಗಿ, ಅಣಶಿ, ಬಜಾರ್‌ಕುಣಂಗ್, ಘಾಟ್ ಕುಣಂಗ್, ಗುಂದ, ಪಣಸೋಲಿ ಸೇರಿ ಹತ್ತಾರು ಗ್ರಾಮದ 3 ರಿಂದ 4 ಸಾವಿರ ಕುಟುಂಬಗಳಿಗೆ 15 ಲಕ್ಷ ಪ್ಯಾಕೇಜ್ ನೀಡಿ ಎನ್‌ಜಿಒ ಒಂದರ ಮೂಲಕ ಮನವೊಲಿಸಿ ಜನರನ್ನ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು: ಜೋಯಿಡಾದ ಜನರು ಮೂಲ ಅರಣ್ಯ ನಿವಾಸಿಗಳಾಗಿದ್ದು, ನಮ್ಮನ್ನ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಜೋಯಿಡಾದಲ್ಲಿ ಕುಣಬಿ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಜೋಯಿಡಾದಲ್ಲಿ ಒಂದೇ ಒಂದು ಕುಟುಂಬವನ್ನೂ ಒಕ್ಕಲೆಬ್ಬಿಸಬಾರದು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮದ ವಿರುದ್ದ ಆಕ್ರೋಶ ಹೊರ ಹಾಕಲಾಯಿತು.
ಇನ್ನು ತಾಲೂಕಿನಲ್ಲಿ ಈ ಹಿಂದೆ ಕೆಲ ಕುಟುಂಬಗಳಿಗೆ ಹಣ ನೀಡಿ ಒಕ್ಕಲೆಬ್ಬಿಸಲಾಗಿತ್ತು. ಅವರುಗಳು ಸದ್ಯ ಗೋವಾದಲ್ಲಿ ಬೀದಿಗೆ ಬಿದ್ದಿದ್ದು, ಈಗಿರುವ ಜನರನ್ನ ಇದೇ ಪರಿಸ್ಥಿತಿಗೆ ತರಬೇಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದಲ್ಲದೇ 15 ಲಕ್ಷ ಪರಿಹಾರ ಹಣ ಕೊಡುತ್ತೇವೆ ಎಂದು ಹೇಳಲಾಗುತ್ತಿದೆ.
ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ: ಇದು ಈಗಿನ ಯುಗದಲ್ಲಿ ಯಾವುದಕ್ಕೆ ಸಾಲುತ್ತದೆ. ನಮ್ಮ ಜಮೀನು, ನಮ್ಮ ಮನೆ ನಮಗೇ ಇರಲಿ ಎನ್ನುವುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಪ್ರತಿಭಟನೆಗೆ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಹಾಜರಿರದ್ದಕ್ಕೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಭಟನೆ ವೇಳೆ, ಉತ್ತರ ಕೊಡಲು ಕೇಳಿದ್ದೆವು. ಆದರೆ, ಅಧಿಕಾರಿಗಳೇ ಬಂದಿಲ್ಲ. ಮುಂದಿನ ತಿಂಗಳ ಮೊದಲ ವಾರದಲ್ಲಿ ಅಧಿಕಾರಿಗಳು ಸಭೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಜೋಯಿಡಾದಲ್ಲಿ ನಡೆದ ಪ್ರತಿಭಟನೆಗೆ ಮಾಜಿ ಶಾಸಕರಾದ ಸುನೀಲ್ ಹೆಗಡೆ, ಎಸ್.ಎಲ್.ಘೋಟ್ನೇಕರ್ ಸೇರಿ ಹಲವರು ಬೆಂಬಲ ನೀಡಿದರು. ಜೋಯಿಡಾದಲ್ಲಿನ ಕಾಡು ಇಂದಿಗೂ ಉಳಿಯಲು ಅರಣ್ಯವಾಸಿಗಳೇ ಕಾರಣ, ಅವರನ್ನ ಸ್ಥಳಾಂತರ ಮಾಡಬೇಡಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸಹ ಶಿಕ್ಷಕರ ನೇಮಕಾತಿ ಅಕ್ರಮ: ರಾಜ್ಯದೆಲ್ಲೆಡೆ ಸಿಐಡಿ ದಾಳಿ, 38 ಶಿಕ್ಷಕರ ಬಂಧನ