ಕಾರವಾರ: ಕಾರ್ಮಿಕ ಹಾಗೂ ರೈತ ವಿರೋಧಿ ನೀತಿ ಖಂಡಿಸಿ ಮತ್ತು ಕೋವಿಡ್-19 ಪರಿಕರಗಳ ಖರೀದಿಯಲ್ಲಿನ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಸಿಐಟಿಯು, ಎಐಟಿಯುಸಿ, ಎಸ್ಎಫ್ಐ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇಂದು ಕಾರವಾರದಲ್ಲಿ ಜೈಲ್ ಬರೋ ಹೋರಾಟ ನಡೆಸಿದರು.
ಕಾರವಾರದ ಮಾಲಾದೇವಿ ಮೈದಾನದಿಂದ ಸುರಿಯುವ ಮಳೆಯಲ್ಲಿಯೇ ಕ್ವಿಟ್ ಇಂಡಿಯಾ ನೆನಪಿನಲ್ಲಿ ಸೇವ್ ಇಂಡಿಯಾ ಘೋಷಣೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು.
ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕೋವಿಡ್ ಡ್ಯೂಟಿಯಲ್ಲಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಖಾಯಂ ಮಾಡುವಂತೆ ಒತ್ತಾಯಿಸಿದರು. ಮಾತ್ರವಲ್ಲದೆ ಕೊರೊನಾ ರಕ್ಷಣಾ ಪರಿಕರಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು.