ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಅರಣ್ಯ ಅತಿಕ್ರಮಣದಾರರ ಪರವಾದ ಧ್ವನಿ ಜೋರಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ದಾಳವಾಗಿಯೂ ಇದು ಬಳಕೆಯಾಗುತ್ತಿದ್ದು, ಆಡಳಿತ ಮತ್ತು ವಿರೋಧಿಗಳು ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುವ ಪ್ರಕ್ರಿಯೆ ಜರುಗುತ್ತಿದೆ. ವಿರೋಧಿಗಳ ಪ್ರತಿಭಟನೆಗಳ ನಡುವೆ ಆಡಳಿತ ಪಕ್ಷದವರು ತಾವು ಅತಿಕ್ರಮಣದಾರರ ಪರ ಎಂದು ಬಿಂಬಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.80 ರಷ್ಟು ಪ್ರದೇಶ ಅರಣ್ಯದಿಂದ ಕೂಡಿದೆ. ಇಲ್ಲಿ ಅರಣ್ಯ ಅತಿಕ್ರಮಣದಾರರ ಸಂಖ್ಯೆಯೂ ಹೆಚ್ಚಿದೆ. ಆದರೆ ಇತ್ತೀಚಿಗೆ ಅವರಿಗೆ ಸಿಗಬೇಕಾದ ಹಕ್ಕು ಸರಿಯಾಗಿ ಸಿಗುತ್ತಿಲ್ಲ. ಜಿಪಿಎಸ್ ಆಗಿದ್ದರೂ ಸಹ ಅದರ ಮುಂದಿನ ಪ್ರಕ್ರಿಯೆ ವಿಳಂಬವಾಗಿದೆ. ಇದರಿಂದ ಸರ್ಕಾರಿ ಸೌಲಭ್ಯಗಳಿಂದ ಅತಿಕ್ರಣದಾರರು ವಂಚಿತರಾಗಿದ್ದಾರೆ.
ಅಲ್ಲದೇ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳ ಆರೋಪವೂ ಹೆಚ್ಚಾಗಿದ್ದು, ಇದೆಲ್ಲವೂ ಚುನಾವಣೆಯ ಸಂದರ್ಭದಲ್ಲಿ ಮುನ್ನಲೆಗೆ ಬಂದಿದೆ. ಈಗಾಗಲೇ ಶಿರಸಿಯ ಸಿದ್ದಾಪುರ ಭಾಗದಲ್ಲಿ ಈ ಸಂಬಂಧ ಬೃಹತ್ ಪ್ರತಿಭಟನೆಗಳೂ ನಡೆದಿದೆ. ಆದರೆ ಆಡಳಿತ ಪಕ್ಷವಾದ ಬಿಜೆಪಿಗರು ಮಾತ್ರ ಸರ್ಕಾರ ಅತಿಕ್ರಮಣದಾರರ ಪರವಾಗಿದ್ದು, ಶೀಘ್ರವಾಗಿ ಹಕ್ಕು ಪತ್ರ ನೀಡುವ ಮತ್ತು ಸರ್ಕಾರಿ ಸೌಲಭ್ಯ ನೀಡುವ ವ್ಯವಸ್ಥೆ ಆಗಲಿದೆ ಎಂಬ ಮಾತನ್ನು ಹೇಳುತ್ತಿದ್ದಾರೆ.
ಇನ್ನು ಅರಣ್ಯ ಅತಿಕ್ರಮಣದಾರರು ಮತ್ತಷ್ಟು ಭಯ ಪಡಲು ಕಾರಣ, ಸುಪ್ರೀಂ ಕೋರ್ಟ್ನಲ್ಲಿ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಕುರಿತ ವಿಚಾರಣೆಯೂ ಆಗಿದೆ. ಇದೇ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಷ್ಟ ನಿಲುವು ತೆಗೆದುಕೊಳ್ಳದ ಕಾರಣ ಪ್ರತಿಭಟನೆಗಳು ನಡೆದಿದೆ. ಸುಪ್ರೀಂ ಕೋರ್ಟ್ನಲ್ಲಿ ಅರಣ್ಯ ವಾಸಿಗಳ ಪರವಾಗಿ ಸರ್ಕಾರಗಳು ಅಫಿಡವಿಟ್ ಸಲ್ಲಿಸಬೇಕಿದೆ. ಅಲ್ಲದೇ ಇತರ ಸೌಲಭ್ಯಗಳೂ ಸಹ ಅತಿಕ್ರಮಣದಾರರಿಗೆ ಸಿಗುವಂತೆ ಮಾಡಬೇಕಿದೆ. ಜಿಲ್ಲೆಯಲ್ಲಿ ಅತಿಕ್ರಮಣದಾರರ ಸಂಖ್ಯೆ ಹೆಚ್ಚಿರುವ ಕಾರಣ ಶಾಸಕರು, ಸಚಿವರು ಮತ್ತು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ: ಅರಣ್ಯ ಸಂತ್ರಸ್ತರ ಹೋರಾಟಕ್ಕೆ ನಿವೃತ್ತ ನ್ಯಾ. ನಾಗಮೋಹನದಾಸ ಬೆಂಬಲ..