ಶಿರಸಿ: ಸಿದ್ದರಾಮಯ್ಯನವರು ದೊಡ್ಡ ಸ್ಫೋವಾಗಿ ಸಿಎಂ ಸ್ಥಾನ ಕಳೆದುಕೊಂಡರು. ಕೆಪಿಸಿಸಿಗೆ ಹೊಸ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್ಸಿಗೇ ದೊಡ್ಡ ಸ್ಫೋಟ ಮಾಡುವ ನಾಯಕ ಸಿದ್ದರಾಮಯ್ಯ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದರು.
ತಾಲೂಕಿನ ಸೋಂದಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಬಿಜೆಪಿ ಸ್ಫೋಟ ಹೇಳಿಕೆಗೆ ತಿರುಗೇಟು ನೀಡಿ, ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಸ್ಫೋಟದ ಪ್ರಶ್ನೆಯಿಲ್ಲ. ಎಲ್ಲಾ ಶಾಸಕರು ಒಟ್ಟಾಗಿದ್ದೇವೆ. ಕೇಂದ್ರ ಮತ್ತು ರಾಜ್ಯದ ನಾಯಕರು, ಮುಖ್ಯಮಂತ್ರಿಗಳು ಯಾರನ್ನ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಿದ್ದೇವೆ. ಆದ ಕಾರಣ ಸಿದ್ದರಾಮಯ್ಯನವರ ಕನಸು ಎಂದಿಗೂ ಈಡೇರುವುದಿಲ್ಲ ಹಾಗೂ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯ ನುಡಿದರು.
ಶಾಸಕ ತನ್ವೀರ್ ಶೇಟ್‌ಗೆ ಚಾಕು ಹಾಕಿರುವ ಎಸ್ಡಿಪಿಐನವರು ಎಲ್ಲಿ ತಮಗೂ ಹಾಕುತ್ತಾರೋ ಎಂಬ ಭಯದಿಂದ ಜಮೀರ್ ಅಹ್ಮದ್ ಖಾನ್ ಆರ್ಎಸ್ಎಸ್ ನಿಷೇಧಿಸುವ ಹೇಳಿಕೆ ನೀಡಿದ್ದಾರೆ. ಆದರೆ, ಆರ್ಎಸ್ಎಸ್, ಬಜರಂಗ ದಳ ದೇಶದಲ್ಲಿ ಶಾಂತಿ ಕಾಪಾಡಲು, ರಾಷ್ಟ್ರ ಭಕ್ತರನ್ನು ನಿರ್ಮಿಸಲು ಸಹಕಾರಿಯಾಗಿದೆ ಎಂಬುದು ಮುಸ್ಲಿಮರೂ ಸೇರಿ ಅವರಿಗೂ ತಿಳಿದಿದೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಕಾಲದಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಆಗಿಲ್ಲ. ಈಗ ಬಿಜೆಪಿಯಿಂದ ಇರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಮಂಗಳೂರು ಗಲಭೆಯಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಪೊಲೀಸರು ಶಾಂತಿ ತಂದರೂ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಮಂಗಳೂರಿನಲ್ಲಿ ಪೊಲೀಸರು ಬಾಂಬ್ ಇಟ್ಟಿದ್ದಾರೆ ಎಂದು ಹೇಳಿಕೆ ನೀಡುವಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ. ಅವರಿಗೆ ಶಾಂತಿ ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರ ಹೇಳಿಕೆಯನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ ಎಂದರು.
ರಾಜ್ಯದಲ್ಲಿ ಹಿಂದಿನ ಸರ್ಕಾರ ಕಾರಣವೇ ಇಲ್ಲದೆ ಹಿಂದೂ ಕಾರ್ಯಕರ್ತರ ಮೇಲೆ ಹಾಕಿದ್ದ ಪ್ರಕರಣಗಳ ಮಾಹಿತಿ ಪಡೆದು, ಅದನ್ನು ಹಿಂಪಡೆಯುತ್ತೇವೆ. ಈಗಾಗಲೇ ಪ್ರಕರಣದ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದೇವೆ. ಯಾರ ಬಳಿಯಾದರೂ ಮಾಹಿತಿ ಇದ್ದಲ್ಲಿ ಅವರೂ ನೀಡಲಿ. ನಾವೂ ಇಲಾಖೆ ಮುಖಾಂತರ ಮಾಹಿತಿ ಸಂಗ್ರಹಿಸಿ ಹಿಂಪಡೆಯುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.