ಭಟ್ಕಳ: ರೈಲ್ವೇ ಇಲಾಖೆ ಐಜಿಪಿ ಐಪಿಎಸ್ ಅಧಿಕಾರಿ ಡಿ.ರೂಪಾ ಭಟ್ಕಳ ತಾಲೂಕಿನ ನೇತ್ರಾಣಿ ಗುಡ್ಡದ ಬಳಿ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ನಡೆಸುವ ಮೂಲಕ ಸಮುದ್ರದಾಳದ ವಿಸ್ಮಯ ಜಗತ್ತನ್ನು ಕಣ್ತುಂಬಿಕೊಂಡರು.
ಸದಾ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವ ಡಿ.ರೂಪಾ, ತಮ್ಮ ಕುಟುಂಬದೊಂದಿಗೆ ಮುರ್ಡೇಶ್ವರಕ್ಕೆ ಆಗಮಿಸಿ ಇಲ್ಲಿನ ಪ್ರತಿಷ್ಠಿತ ಸ್ಕೂಬಾ ಡೈವಿಂಗ್ ಸಂಸ್ಥೆ ನೇತ್ರಾಣಿ ಅಡ್ವೆಂಚರ್ಸ್ ನುರಿತ ತರಬೇತುದಾರರೊಂದಿಗೆ ಸ್ಕೂಬಾ ಡೈವಿಂಗ್ ಮಾಡಿದರು.
![IPS Officer D. Rupa Scuba Diving](https://etvbharatimages.akamaized.net/etvbharat/prod-images/5422637_thumbn.jpg)
ನೇತ್ರಾಣಿ ಅಡ್ವೆಂಚರ್ಸ್ನ ನುರಿತ ತರಬೇತುದಾರರ ಗಣೇಶ ಹರಿಕಾಂತ್ ,ಡಿ.ರೂಪಾ ಅವರಿಗೆ ಸ್ಕೂಬಾ ಡೈವಿಂಗ್ ತರಬೇತಿ ನೀಡಿ ಬಳಿಕ ಸಮುದ್ರದಾಳದಲ್ಲಿ ಡೈವಿಂಗ್ ಮಾಡುವಲ್ಲಿ ಸಹಕರಿಸಿದರು. ರೂಪಾ ಅವರೊಂದಿಗೆ ಆಗಮಿಸಿದ ಅವರು ಇಬ್ಬರು ಮಕ್ಕಳು ಕೂಡ ಡೈವಿಂಗ್ ನಡೆಸಿ ಸಾಹಸ ಮೆರೆದರು. ಬೆಳಿಗ್ಗೆ ನೇತ್ರಾಣಿ ದ್ವೀಪದ ಬಳಿ ತೆರಳಿದ್ದ ತಂಡ ತರಬೇತಿ ಬಳಿಕ ಸ್ಕೂಬಾ ಡೈವಿಂಗ್ ನಡೆಸಿ ಮಧ್ಯಾಹ್ನದ ಹೊತ್ತಿಗೆ ವಾಪಸ್ಸಾದರು. ಸ್ಕೂಬಾ ಡೈವಿಂಗ್ ಬಳಿಕ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಿ.ರೂಪಾ, ಸಮುದ್ರದಾಳದ ಸೊಬಗನ್ನು ಅಲ್ಲಿರುವ ಜೀವರಾಶಿಯನ್ನು ಕಂಡಿದ್ದು ಆನಂದ ಮೂಡಿಸಿದೆ ಎಂದರು. ಜೊತೆಗೆ ತರಬೇತುದಾರರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಪ್ರವಾಸಿಗರಿಗೆ ಇದೇ ರೀತಿ ಉತ್ತಮ ಸೇವೆ ನೀಡಿ ಎಂದು ಪ್ರೋತ್ಸಾಹಿಸಿದರು.