ಶಿರಸಿ (ಉ.ಕ): ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಕುರಿತು ಕರ್ನಾಟಕ ಕ್ರಿಕೆಟ್ ಅಕಾಡೆಮಿ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಭೇಟಿ ಮಾಡಿದ್ದು, ಕ್ರೀಡಾಂಗಣವನ್ನು ಕಾರವಾರದ ಬದಲು ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣವನ್ನೇ ಮೇಲ್ದರ್ಜೆಗೆ ಏರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಕರ್ನಾಟಕ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಸಂತೋಷ ಮೆನನ್, ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ್ರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಉತ್ತರ ಕನ್ನಡದಲ್ಲಿ ಕ್ರೀಡಾಂಗಣ ನಿರ್ಮಿಸುವ ಕುರಿತು ಚರ್ಚಿಸಿದ್ದಾರೆ. ಈ ಬಗ್ಗೆ ಹೆಬ್ಬಾರರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ತಾವು ಸಹಕರಿಸುವುದಾಗಿ ತಿಳಿಸಿದ್ದಾರೆ.
ಕ್ರೀಡಾಂಗಣ ನಿರ್ಮಾಣಕ್ಕೆ 12 ಎಕರೆ ಜಾಗ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಕಾರವಾರದಲ್ಲಿ ಅಷ್ಟೊಂದು ದೊಡ್ಡ ಜಾಗ ಹುಡುಕುವುದು ಕಷ್ಟ ಎನ್ನಲಾಗಿದೆ. ಅದರಲ್ಲಿ 6 ಎಕರೆ ಕ್ರೀಡಾಂಗಣಕ್ಕೆ 6 ಎಕರೆ ಪಾರ್ಕಿಂಗ್ ಲಾಟ್ ನಿರ್ಮಿಸಲು ಮೀಸಲು ಎನ್ನಲಾಗಿದೆ. ಆದರೆ, ಶಿರಸಿಯ ಮಾರಿಕಾಂಬಾ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಿದಲ್ಲಿ ಹೊರ ವಲಯದಲ್ಲಿ ದೊಡ್ಡ ಪಾರ್ಕಿಂಗ್ ಸಹ ಲಭ್ಯವಿದ್ದು, ಕುಳಿತುಕೊಳ್ಳುವ ಆಸನ ಸೇರಿದಂತೆ ಕ್ರೀಡಾಂಗಣದ ಬಹುಪಾಲು ನಿರ್ಮಾಣ ಕಾರ್ಯ ಉಳಿತಾಯವಾಗಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಜಿಲ್ಲಾ ಕೇಂದ್ರವಾಗಿದ್ದರೂ, ಶಿರಸಿಯೂ ಬೆಳವಣಿಗೆ ಕಂಡಿದೆ. ಅದೇ ರೀತಿ ಶಿರಸಿ ಜಿಲ್ಲೆಯನ್ನು ರಚನೆ ಮಾಡಬೇಕು ಎಂಬ ಕೂಗು ಸಹ ಕೇಳಿ ಬರುತ್ತಿದೆ. ಆದ ಕಾರಣ ಪ್ರತಿ ಬಾರಿಯೂ ಅಭಿವೃದ್ಧಿ ಕಾರ್ಯಗಳು ಬಂದಾಗ ಶಿರಸಿಗೂ ಆದ್ಯತೆ ನೀಡಬೇಕು ಎನ್ನುವುದು ಇಲ್ಲಿಯ ಜನರ ಬೇಡಿಕೆಯಾಗಿದೆ.