ಭಟ್ಕಳ: ಮುರುಡೇಶ್ವರದ ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿ ಹೃಷಿಕೇಶ ಪತಿಹಾರ ಫೆಬ್ರವರಿ 14 ಮತ್ತು 15ರಂದು ಮಂಡ್ಯದ ಶ್ರೀ ಆದಿಚುಂಚನಗಿರಿ ಮಠದ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಇನ್ಸ್ಫೈರ್ ಅವಾರ್ಡ್ ಸ್ಫರ್ಧೆಯಲ್ಲಿ ಅಗ್ರೀ ರೋಬೋ ತಯಾರಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ.
ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿ ಹೃಷಿಕೇಶ ಪತಿಹಾರ ಸಿದ್ಧಪಡಿಸಿದ್ದ ಈ ಅಗ್ರೀ ರೋಬೋ ಡೀಸೆಲ್, ಪೆಟ್ರೋಲ್‍ನ ಅವಶ್ಯಕತೆ ಇಲ್ಲದೇ ನಿಸರ್ಗದ ಸೌರಶಕ್ತಿಯನ್ನು ಬಳಸಿಕೊಂಡು ರಿಮೋಟ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದನ್ನು ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾಗಿದೆ. ರೋಬೋ ಒಂದೇ ಸಮಯದಲ್ಲಿ ಹೊಲವನ್ನು ಉಳುವ, ನೀರು ಹಾಯಿಸುವ ಹಾಗೂ ಬೀಜ ಬಿತ್ತುವ ಕೆಲಸವನ್ನು ಒಟ್ಟಿಗೆ ನಿರ್ವಹಿಸುವ ಮೂಲಕ ರೈತರ ಸಮಯ ಮತ್ತು ಮ್ಯಾನ್ ಪವರ್ ಕಡಿಮೆ ಮಾಡಿ ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಆಗ್ರೀ ರೋಬೋ ತಯಾರಿಕೆಯ ಸಾಧನೆಯಲ್ಲಿ ಶಿಕ್ಷಕರಾದ ಪದ್ಮ ಪೂಜಾರಿ ಹಾಗೂ ರಾಘವೇಂದ್ರ ನಾಯ್ಕರವರು ಈತನಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಂಕಾಳ ಎಸ್. ವೈದ್ಯ ಹಾಗೂ ಪುಷ್ಪಲತಾ ವೈದ್ಯ, ಪ್ರಾಂಶುಪಾಲರಾದ ಜಗನಾಥ ಚಿನೇಕರ್ ಹಾಗೂ ಶಿಕ್ಷಕ ವೃಂದದವರು ಹೃಷಿಕೇಶ್ನನ್ನು ಅಭಿನಂದಿಸಿದ್ದಾರೆ.