ಕಾರವಾರ: ಬೌದ್ಧ ಧರ್ಮೀಯರ ಧರ್ಮಗುರು ದಲೈಲಾಮಾ ಅವರ ಆಂತರಿಕ ಚಲನವಲನಗಳ ಬಗ್ಗೆ ಚೀನಾ ಬೇಹುಗಾರಿಕೆ ನಡೆಸುತ್ತಿರುವ ಆರೋಪದ ಬೆನ್ನಲ್ಲೇ ಮುಂಡಗೋಡದ ಟಿಬೆಟಿಯನ್ ಕಾಲೋನಿಯಲ್ಲಿಯೂ ಚೀನಾ, ಏಜೆಂಟರುಗಳ ಮೂಲಕ ವ್ಯೂಹ ರಚಿಸಿರುವ ಆರೋಪ ಕೇಳಿಬಂದಿದೆ.
ಬೇಹುಗಾರಿಕೆ ಆರೋಪದ ಮೇಲೆ ಎರಡು ವಾರದ ಹಿಂದೆ ದೆಹಲಿಯಲ್ಲಿ ಬಂಧಿತನಾಗಿರುವ ಚೀನಾದ ಚಾರ್ಲಿ ಪೆಂಗ್ ಎನ್ನುವಾತ ದೆಹಲಿ, ಹಿಮಾಚಲ ಮಾತ್ರವಲ್ಲದೆ ಕರ್ನಾಟಕದಲ್ಲಿಯೂ ಬೇಹುಗಾರಿಕೆ ನಡೆಸುತ್ತಾ ತನ್ನ ಜಾಲ ವಿಸ್ತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಾತ್ರವಲ್ಲದೇ, ಈತ ಮುಂಡಗೋಡದ ಡ್ರೆಪುಂಗ್ ಲೋಸ್ಲಿಂಗ್ ಮಾನಸ್ಟರಿಗೆ 10 ಲಕ್ಷ, ಸೋನಮ್ ದೋರ್ಜಿ ಎಂಬಾತನಿಗೆ 7 ಲಕ್ಷ ಹಾಗೂ ಲೋಬ್ಸಾಂಗ್ ದೋರ್ಜಿ ಎಂಬಾತನಿಗೆ ಒಂದು ಕೋಟಿ ರೂ. ಹಣವನ್ನು ವರ್ಗಾಯಿಸಿದ್ದು, ಇದು ಚೀನಾದ ಹವಾಲ ಹಣ ಎನ್ನಲಾಗುತ್ತಿದೆ.
ಕೋಟಿ ಕೋಟಿ ವ್ಯವಹಾರದ ಬೆನ್ನು ಹತ್ತಿರುವ ತನಿಖಾ ಸಂಸ್ಥೆಗಳು, ಮುಂಡಗೋಡದ ಟಿಬೆಟಿಯನ್ ಕಾಲೋನಿಯಲ್ಲಿನ ಜಾಲವನ್ನು ಭೇದಿಸಲು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಸ್ಥಳೀಯವಾಗಿ ಈ ಇಬ್ಬರ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಮೊದಲಿನಿಂದಲೂ ದಲೈಲಾಮಾ ವಿರೋಧಿಯಾಗಿರುವ ಚೀನಾ, ಇದೀಗ ಮುಂಡಗೋಡ ಟಿಬೆಟಿಯನ್ನರಿಗೆ ಏಜೆಂಟರುಗಳ ಮೂಲಕ ಹಣದ ಆಮಿಷ ತೋರಿಸುತ್ತಿದೆ ಎನ್ನಲಾಗಿದೆ.
ತನಿಖಾ ಸಂಸ್ಥೆಗಳು ಕೆಲ ಬೌದ್ಧ ಬಿಕ್ಕುಗಳ ವಿಚಾರಣೆ ನಡೆಸುತ್ತಿವೆ. ಆದರೆ, ಈ ಬಗ್ಗೆ ಮುಂಡಗೋಡದ ಟಿಬೆಟಿಯನ್ ಕಾಲೋನಿ ಬಿಕ್ಕುಗಳನ್ನು ಕೇಳಿದ್ರೆ ಹೇಳೋದೆ ಬೇರೆ. ಟಿಬೆಟಿಯನ್ನರಲ್ಲಿ ಆಂತರಿಕ ಗೊಂದಲ ಸೃಷ್ಟಿಸಲಾಗುತ್ತಿದೆ. ಚೀನಾದಿಂದ ಹಣ ವರ್ಗಾವಣೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಟಿಬೆಟ್ ನಲ್ಲಿರುವ ಮನೆಯವರು ನಮಗೆ ನೇರವಾಗಿ ಹಣ ಕಳುಹಿಸಲು ಸಾಧ್ಯವಿಲ್ಲದ ಕಾರಣ ಏಜೆಂಟರುಗಳ ಮೂಲಕ ಕಳುಹಿಸುತ್ತಿರುವುದಾಗಿ ಹೇಳುತ್ತಿದ್ದಾರೆ.
ಈ ಸಂಬಂಧ ಕೆಲವರ ವಿಚಾರಣೆ ನಡೆಸಲಾಗುತ್ತಿದ್ದು, ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕಾಲೋನಿಯ ಮೊನೆಸ್ಟ್ರಿ ಮುಖ್ಯಸ್ಥರು ತಿಳಿಸಿದ್ದಾರೆ.