ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೆ ಹೆಚ್ಚುತ್ತಿದ್ದು, ಅದರ ನಿಯಂತ್ರಣವೇ ಇದೀಗ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಈ ನಡುವೆ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದು ಕದ್ದುಮುಚ್ಚಿ ಸುತ್ತಾಡುತ್ತಿರುವವರು ತಮ್ಮ ಟ್ರಾವೆಲ್ ಹಿಸ್ಟರಿ ಮುಚ್ಚಿಡುತ್ತಿದ್ದು, ಪರಿಣಾಮ ಸೋಂಕು ಇನ್ನಷ್ಟು ಬಿಗಡಾಯಿಸಿ ಮತ್ತಷ್ಟು ಜನರಿಗೆ ಹರಡಲು ಕಾರಣವಾಗುತ್ತಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇದೀಗ 500ರ ಗಡಿ ದಾಟಿದೆ. ಜತಗೆ ಸಾವಿನ ಸಂಖ್ಯೆ ಕೂಡ ಮೂರಕ್ಕೇರಿದೆ. ಇಂತಹ ಸಮಯದಲ್ಲಿ ಸುರಕ್ಷತೆ ಬಯಸುತ್ತಿರುವ ಜನರು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ತಿಳಿದು ಕಂಗಾಲಾಗಿದ್ದಾರೆ. ಕೆಲವರು ಸೋಂಕಿನ ಲಕ್ಷಣಗಳು ಇದ್ದರೂ ಅದನ್ನು ಮುಚ್ಚಿಡುತ್ತಿದ್ದಾರೆ. ಮಾತ್ರವಲ್ಲದೆ ತಮ್ಮ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳ ಮುಂದೆ ಹೇಳುತ್ತಿಲ್ಲ.
ಕಳೆದ ಕೆಲ ದಿನಗಳ ಹಿಂದೆ ಕಾರವಾರದಲ್ಲಿ ವೃದ್ಧೆಯೊಬ್ಬಳು ಮಂಗಳೂರಿನ ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟು, ಮೂತ್ರಪಿಂಡ ರೋಗದ ಸಮಸ್ಯೆ ಇದೆ ಎಂದು ಚಿಕಿತ್ಸೆ ಪಡೆಯಲು ದಾಖಲಾಗಿದ್ದಳು. ಈಕೆಯ ಟ್ರಾವೆಲ್ ಹಿಸ್ಟರಿ ಬಗ್ಗೆ ವೈದ್ಯಕೀಯ ಸಿಬ್ಬಂದಿ ಕೇಳಿದ್ದರು. ವೃದ್ಧೆ ಮತ್ತು ಆಕೆ ಕುಟುಂಬದವರು ಹೇಳಿರಲಿಲ್ಲ. ಆದರೆ ಆಕೆಯ ಆರೋಗ್ಯದಲ್ಲಿ ಏರುಪೇರಾದ ಬಳಿಕ ಕೊನೆಯಲ್ಲಿ ಸಂಶಯದ ಮೇರೆಗೆ ಕೋವಿಡ್ ಪರೀಕ್ಷೆ ನಡೆಸಿದಾಗ ಈಕೆಗೆ ಕೊರೊನಾ ಇರುವುದು ದೃಢಪಟ್ಟಿದೆ. ಮಾತ್ರವಲ್ಲದೆ ಇವರ ಎಡವಟ್ಟಿನಿಂದಾಗಿ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಸೇರಿ ಹತ್ತು ಜನರಿಗೆ ಸೋಂಕು ತಗುಲಿದೆ. ಇನ್ನೂ 20 ಜನರ ಕೋವಿಡ್ ಪರೀಕ್ಷಾ ವರದಿ ಬರುವುದು ಬಾಕಿ ಇದೆ.
ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಜನ ಸೋಂಕಿನ ಲಕ್ಷಣ ಮುಚ್ಚಿಡುವುದು ಸರಿಯಲ್ಲ. ಜನ ಜಾಗೃತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ರೋಗದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ತಿಳಿಸುವ ಮೂಲಕ ಸೋಂಕು ಹರಡದಂತೆ ತಡೆಯಬೇಕು ಎನ್ನುತ್ತಾರೆ ಅಧಿಕಾರಿಗಳು.
ಇನ್ನು ಜಿಲ್ಲೆಯಲ್ಲಿ ಸೋಂಕಿತರಿಗೆ ಆಯಾ ತಾಲೂಕುಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ತಡೆಗೆ ಜಿಲ್ಲಾಡಳಿತ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ವ್ಯಾಪಾರಸ್ಥರು ಮಧ್ಯಾಹ್ನದ ಬಳಿಕ ಸ್ವಯಂ ಪ್ರೇರಿತ ಬಂದ್ಗೆ ಮುಂದಾಗಿದ್ದಾರೆ.