ಕಾರವಾರ: ರಾಜ್ಯದಲ್ಲಿ ಶಾಂತಿಪ್ರಿಯರ ನಾಡು ಅಂತಲೇ ಹೆಸರುವಾಸಿಯಾಗಿರುವ ಜಿಲ್ಲೆ ಉತ್ತರಕನ್ನಡ. ತಾನು ಹೊಂದಿರುವ ಹತ್ತಾರು ಪ್ರವಾಸಿ ತಾಣಗಳಿಂದಲೇ ದೇಶ ವಿದೇಶಗಳಲ್ಲೂ ಸಾಕಷ್ಟು ಹೆಸರು ಗಳಿಸಿದೆ. ಆದರೆ, ಉತ್ತರಕನ್ನಡದಲ್ಲೂ ಸಹ ಗಾಂಜಾ ಘಮಲಿನ ಘಾಟು ಬರುತ್ತಿದೆ. ಕಳೆದ ಏಳು ತಿಂಗಳ ಅವಧಿಯಲ್ಲಿ ಬರೋಬ್ಬರಿ 23 ಗಾಂಜಾ ಸಾಗಾಟ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಸದ್ಯ ಅನ್‌ಲಾಕ್ ಜಾರಿಯಾಗಿದ್ದು, ಪ್ರವಾಸಿಗರ ಆಗಮನ ನಿಧಾನಗತಿಯಲ್ಲಿ ಪ್ರಾರಂಭವಾಗುತ್ತಿದೆ. ಇದರ ನಡುವೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದ್ದು, ಅಕ್ರಮವಾಗಿ ಸದ್ದಿಲ್ಲದೇ ನಡೆಯುತ್ತಿದ್ದ ಗಾಂಜಾ ವ್ಯವಹಾರವನ್ನು ಕಡಿವಾಣ ಹಾಕಲು ಮುಂದಾಗಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಶಿರಸಿ, ಕಾರವಾರ, ಮುರುಡೇಶ್ವರ, ಅಂಕೋಲಾ ಹಾಗೂ ಬನವಾಸಿ ಭಾಗಗದಲ್ಲಿ 5 ಗಾಂಜಾ ಸಾಗಾಟ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂಬಂಧ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಜನವರಿಯಿಂದ ಜುಲೈವರೆಗೆ ಪೊಲೀಸರು ಬರೋಬ್ಬರಿ 23 ಗಾಂಜಾ ಸಾಗಣೆ ಪ್ರಕರಣಗಳನ್ನ ಪತ್ತೆ ಮಾಡಿದ್ದು, 34 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 2,86,600 ರೂಪಾಯಿ ಮೌಲ್ಯದ 10 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈವರೆಗೆ ಪತ್ತೆಯಾದ ಪ್ರಕರಣಗಳನ್ನ ಆಧರಿಸಿ ಜಿಲ್ಲೆಗೆ ಹಾವೇರಿ ಜಿಲ್ಲೆಯ ಹಾನಗಲ್, ಶಿವಮೊಗ್ಗ ಜಿಲ್ಲೆಯ ಸಾಗರ ಸೇರಿದಂತೆ ಪುಣೆ ಭಾಗದಿಂದ ಗಾಂಜಾ ಸಾಗಾಟವಾಗುತ್ತಿರುವುದು ಬೆಳಕಿಗೆ ಬಂದಿದೆ.
ಕೆಲವೊಂದು ಪ್ರಕರಣಗಳಲ್ಲಿ ಪೆಡ್ಲರ್‌ಗಳು ಸಹ ಬಂಧಿತರಾಗಿದ್ದು, ಕೆಲವು ಪ್ರಕರಣಗಳಲ್ಲಿ ಮೂಲ ಪತ್ತೆ ಮಾಡುವುದು ಕಷ್ಟಕರವಾಗಿದೆ ಅಂತಾ ಎಸ್ಪಿ ತಿಳಿಸಿದ್ದಾರೆ. ಇನ್ನು ಈ ಹಿಂದೆ ವಿದೇಶಿ ಪ್ರವಾಸಿಗರಿಂದಲೇ ಗಾಂಜಾ ಪ್ರಕರಣಗಳು ಹೆಚ್ಚುತ್ತಿವೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಪ್ರವಾಸಿಗರಿಲ್ಲ. ಆದರೂ, ಗಾಂಜಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ.