ಕಾರವಾರ(ಉತ್ತರ ಕನ್ನಡ): ಇಲ್ಲಿನ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ಗಣಿಗಾರಿಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎನ್ನುವ ಕಾರಣಕ್ಕೆ ರಾಷ್ಟ್ರೀಯ ಹಸಿರುಪೀಠ ಉತ್ತರ ಕನ್ನಡದಲ್ಲಿ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತ್ತು. ಇದರ ಪರಿಣಾಮ ಕರಾವಳಿ ಭಾಗದ ಹಲವೆಡೆ ನಡೆಯುತ್ತಿದ್ದ ಅಧಿಕೃತ ಮರಳುಗಾರಿಕೆಯೂ ಸ್ಥಗಿತಗೊಂಡಿತ್ತು. ಆದರೆ ಹಸಿರುಪೀಠದ ಆದೇಶಕ್ಕೆ ಕ್ಯಾರೇ ಎನ್ನದೇ ಕೆಲವು ದಂದೆಕೋರರು ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕೃತ ಮರಳು ಗಣಿಗಾರಿಕೆ ಸ್ಥಗಿತಗೊಂಡು ಆರು ತಿಂಗಳು ಕಳೆದಿವೆ. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸರ್ಕಾರಿ ಕಾಮಗಾರಿಗಳೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಮರಳಿನ ಕೊರತೆ ಎದುರಾಗಿಲ್ಲ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಎಂದು ಉದ್ದಿಮೆದಾರರು ಹೇಳಿದ್ದಾರೆ.
ಅಕ್ರಮದ ಕಾರುಬಾರು: ಸಿಆರ್‌ಝೆಡ್ ವಲಯದಲ್ಲಿ ಮರಳು ಗಣಿಗಾರಿಕೆ ನಡೆಸದಂತೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ಅದರಂತೆ ಕಾಳಿ, ಶರಾವತಿ, ಗಂಗಾವಳಿ ಸೇರಿದಂತೆ ವಿವಿಧೆಡೆ ನಡೆಯುತ್ತಿದ್ದ ಅಧಿಕೃತ ಮರಳುಗಾರಿಕೆ ಸ್ಥಗಿತಗೊಂಡಿತ್ತು. ಆದರೆ ಕೆಲ ದಂದೆಕೋರರು ಅಧಿಕಾರಿಗಳ ಕಣ್ತಪ್ಪಿಸಿ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಕ್ರಮವಾಗಿ ನದಿಗಳಲ್ಲಿ ಮರಳು ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಅನಧಿಕೃತವಾಗಿ ತೆಗೆಯುವವರಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಅಧಿಕ ಬೆಲೆ ನಿಗಧಿ: ಅಧಿಕೃತ ಮರಳು ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮರಳು ಲಭ್ಯವಾಗುತ್ತಿತ್ತು. ಆದರೆ ಇದೀಗ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಮರಳಿನ ಬೆಲೆ ಗಗನಕ್ಕೇರಿದ್ದು ಇದು ಬಡವರಿಗೆ ಹೊರೆಯಾಗುತ್ತಿದೆ. 10 ಸಾವಿರ ರೂ.ಗೆ ಸಿಗುತ್ತಿದ್ದ ಒಂದು ಲೋಡ್ ಮರಳಿಗೆ ಇದೀಗ 15 ರಿಂದ 18 ಸಾವಿರ ರೂಪಾಯಿ ನೀಡಬೇಕಾಗಿದ್ದು ಸರ್ಕಾರಿ ಕಾಮಗಾರಿಗಳಿಗೂ ಸಹ ಇದೇ ಮರಳು ಪೂರೈಕೆಯಾಗುತ್ತಿದೆ.
ಮರಳು ಗಣಿಗಾರರಿಗೆ ಅನ್ಯಾಯ: ಮರಳುಗಾರಿಕೆಯನ್ನೇ ನಂಬಿಕೊಂಡಿದ್ದವರಿಗೆ ಅನ್ಯಾಯವಾಗುತ್ತಿದ್ದು, ಇತ್ತ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದ ರಾಜಧನಕ್ಕೂ ಕತ್ತರಿ ಬೀಳುವಂತಾಗಿದೆ. ಹೀಗಾಗಿ ಅಧಿಕೃತ ಮರಳುಗಾರಿಕೆಗೆ ಅನುಮತಿ ನೀಡುವ ಮೂಲಕ ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಅನ್ನೋದು ಮರಳು ಉದ್ದಿಮೆದಾರರ ಆಗ್ರಹ.
ಸಿಆರ್‌ಝೆಡ್ ವಲಯ ಮರಳು ತೆಗೆಯಲು ಅವಕಾಶ ಇಲ್ಲ: ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಹಸಿರುಪೀಠದ ತಡೆಯಿರುವ ಹಿನ್ನೆಲೆಯಲ್ಲಿ ಸಿಆರ್‌ಝೆಡ್ ವಲಯದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡುವುದು ಸರ್ಕಾರದಿಂದ ಸಾಧ್ಯವಿಲ್ಲ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ.