ಕಾರವಾರ: ಆಳ ಸಮುದ್ರದಲ್ಲಿ ಅಕ್ರಮವಾಗಿ ಲೈಟ್ ಫಿಶಿಂಗ್ ನಡೆಸುತ್ತಿದ್ದ ಗೋವಾ ಮೂಲದ ಎರಡು ಬೋಟ್ ಸಹಿತ 28 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಾ ಮೂಲದ 'ಡ್ರ್ಯಾಗನ್ ಸಿ' ಎಂಬ ಹೆಸರಿನ ಒಂದು ಬೋಟ್ ಸಣ್ಣ ಬೋಟಿನಲ್ಲಿ 25 ಒಡಿಶಾ ಮೂಲದವರು ಹಾಗೂ 3 ಅಂಕೋಲಾ ಮೂಲದ ಕಾರ್ಮಿಕರು ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ನಿಷೇಧಿತ ಲೈಟ್ ಫಿಶಿಂಗ್ ಮಾಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಕರಾವಳಿ ಕಾವಲು ಪಡೆ ಪೊಲೀಸರು ಎರಡು ಬೋಟ್ಗಳನ್ನು ವಶಕ್ಕೆ ಪಡೆದು, ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಮಾತನಾಡಿದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜ್, ಗೋವಾ ಮೂಲದ ಎರಡು ಬೋಟ್ಗಳು ಅಕ್ರಮವಾಗಿ ಲೈಟ್ ಫಿಶಿಂಗ್ ಮಾಡುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಪ್ರಕರಣ ದಾಖಲಿಸಿದ್ದು, ಅಕ್ರಮವಾಗಿ ಹಿಡಿದ ಮೀನನ್ನು ಸಹ ವಶಕ್ಕೆ ಪಡೆಯಲಾಗಿದೆ. ಹೊರ ರಾಜ್ಯದ ಕಾರ್ಮಿಕರಾದ ಕಾರಣ ಅವರನ್ನು ಚಿಕಿತ್ಸೆಗೊಳಪಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.