ಕಾರವಾರ: ಹೊನ್ನಾವರ ತಾಲೂಕಿನ ಗೇರುಸೊಪ್ಪ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಒಂದು ಕಾರಿನಲ್ಲಿ ಅಕ್ರಮ ಗೋವು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೊನ್ನಾವರದಿಂದ ಗೇರಸೊಪ್ಪ ಮಾರ್ಗದಲ್ಲಿ ಹೋಗುತ್ತಿದ್ದ ಎರ್ಟಿಗಾ ಕಾರಿಗೆ ಮಾವಿನಗುಂಡಿಯಿಂದ ಹೊನ್ನಾವರ ಮಾರ್ಗವಾಗಿ ಬರುತ್ತಿದ್ದ ಸ್ವಿಪ್ಟ್ ಕಾರು ಡಿಕ್ಕಿ ಹೊಡೆದಿದೆ. ಸಿಪ್ಟ್ ಕಾರು ಚಾಲಕನ ಅಜಾಗರುಕತೆ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ತಕ್ಷಣ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆಗಾಗಿ ಮುಂದಾಗಿದ್ದಾರೆ.
ಈ ವೇಳೆ ಸ್ವಿಫ್ಟ್ ವಾಹನದಲ್ಲಿ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿ ಕೊಂಡು ಸಾಗರದಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದು, ಒಂದು ಗೋವು ಮೃತಪಟ್ಟಿದೆ.
ವಾಹನದಲ್ಲಿದ್ದ ಮೂರು ಜನ ಗೋ ಕಳ್ಳರ ಪೈಕಿ ಇಬ್ಬರು ಅಪಘಾತವಾಗುತ್ತಿದ್ದಂತೆ ಪರಾರಿಯಾಗಿದ್ದು, ಓರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು, ಇನ್ನಿಬ್ಬರ ಪತ್ತೆಗೆ ಮುಂದಾಗಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.