ಕಾರವಾರ (ಉತ್ತರ ಕನ್ನಡ): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒಳ್ಳೆಯ ನಾಯಕ. ಆದರೆ ಅವರಿಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ನಾನು ಅವರೊಂದಿಗೆ ಮಾತನಾಡಿಲ್ಲ. ಅವರು ಸಮಯ ನಿಗದಿ ಮಾಡಿ ತೀರ್ಮಾನ ಕೈಗೊಳ್ಳುವ ಬಗ್ಗೆ ಗಮನಕ್ಕೆ ಇಲ್ಲ. ಆದರೆ ಅವರು ಬರುವ ತೀರ್ಮಾನ ಮಾಡಿದಲ್ಲಿ ಅವರನ್ನು ನಾನು ಕಾಂಗ್ರೆಸ್ಗೆ ಸ್ವಾಗತಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಹಳಿಯಾಳದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಥಣಿ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಸವದಿ ಅವರಂತೆ ಇನ್ನೂ ಅನೇಕ ಮುಖಂಡರು ಹಾಗೂ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಆದರೆ ಅವರ ಹೆಸರು ಹೇಳಲು ಆಗುವುದಿಲ್ಲ ಎಂದರು.
ನನಗೆ ಕ್ಷೇತ್ರ ಇಲ್ಲ ಎಂದು ಹೇಳುತ್ತಿದ್ದ ಮಾಜಿ ಡಿಸಿಎಂ ಹಾಗೂ ಆರ್ಎಸ್ಎಸ್ ಹಿರಿಯ ಮುಖಂಡ ಈಶ್ವರಪ್ಪ ಕುಟುಂಬಕ್ಕೆ ಇದೀಗ ಟಿಕೆಟ್ ಇಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ. ಈ ಹಿಂದೆ ನನಗೆ ಕ್ಷೇತ್ರ ಇಲ್ಲ ಎಂದು ಇದೇ ಈಶ್ವರಪ್ಪ ಟೀಕಿಸಿದ್ದರು. ನನಗೆ ರಾಜ್ಯದಲ್ಲಿ ಈಗಲೂ ಎಲ್ಲ ಕ್ಷೇತ್ರದಿಂದಲೂ ಸ್ಪರ್ಧೆಗಾಗಿ ಆಹ್ವಾನ ಮಾಡುತ್ತಿದ್ದಾರೆ. ಆದರೆ ಒಬ್ಬ ಹಿರಿಯ ಮಾಜಿ ಡಿಸಿಎಂ ಆಗಿದ್ದ ಈಶ್ವರಪ್ಪನಿಗೆ ಪಕ್ಷ ಹೀಗೆ ಮಾಡಬಾರದಿತ್ತು. ಈಶ್ವರಪ್ಪ ಮಾತ್ರ ಅಲ್ಲ ಸವದಿ, ಶೆಟ್ಟರ್ ಜತೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ವಿರುದ್ಧ ಅಲ್ಪಸಂಖ್ಯಾತ ಅಭ್ಯರ್ಥಿ- ಸಿದ್ದರಾಮಯ್ಯ: ಇನ್ನು ನನ್ನನ್ನು ಕಂಡು ಭಯಗೊಂಡಿದ್ದರಿಂದ ಇದೀಗ ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಬಯಸಿದ್ದಾರೆ. ಶಿಗ್ಗಾಂವಿಯಲ್ಲಿ ವಿನಯ್ ಕುಲಕರ್ಣಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನಿಲ್ಲುವುದಿಲ್ಲ. ಅಲ್ಲಿ ಅಲ್ಪಸಂಖ್ಯಾತ ಕ್ಯಾಂಡಿಡೇಟ್ ನಿಲ್ಲುತ್ತಾರೆ. ಅಲ್ಲದೆ ಇಂದು ಅಥವಾ ನಾಳೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಮುಸ್ಲಿಂ ಮೀಸಲಾತಿ ರದ್ದತಿ ಇದೀಗ ಸುಪ್ರಿಂಕೋರ್ಟ್ ಮುಂದೆ ಇದ್ದು ಈಗಾಗಲೇ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಮೀಸಲಾತಿ ನೀಡಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಮುಸ್ಲಿಂಮರಿಗೆ 1995 ರಿಂದ ಇದ್ದ 4 ರಷ್ಟು ಮಿಸಲಾತಿ ರದ್ದತಿ ಮಾಡಿರುವುದು ಧರ್ಮದ ರಾಜಕಾರಣ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಆರ್ ವಿ ದೇಶಪಾಂಡೆ ಗೆಲ್ಲುವ ವಿಶ್ವಾಸ: ಹಳಿಯಾಳದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಮತದಾರರು ಆರ್ ವಿ ದೇಶಪಾಂಡೆ ಅವರು ಬಹಳಷ್ಟು ವಿಶ್ವಾಸ ಇಟ್ಟಿದ್ದಾರೆ. ಅವರು ಗೆದ್ದೇ ಗೆಲ್ತಾರೆ. ಕಾಂಗ್ರೆಸ್ ಸರ್ಕಾರ ಬಂದ್ರೆ ದೇಶಪಾಂಡೆ ಅವರ ಸ್ಥಾನಮಾನ ಏನೂ ಎಂಬ ಪತ್ರಕರ್ತರ ಪ್ರಶ್ನೆಗೆ, ನನಗೆ ಭವಿಷ್ಯ ಹೇಳಲು ಬರುವುದಿಲ್ಲ. ಏನೂ ಆಗುತ್ತಿದೆಯೋ ನೋಡೋಣ, ದೇಶಪಾಂಡೆ ಹಿರಿಯರು ಉನ್ನತ ಹುದ್ದೆ ಸಿಗಬಹುದು ಎಂದು ಪ್ರತಿಕ್ರಿಯಿಸಿದರು.
ಸವದಿಗೆ ಅಥಣಿ ಕ್ಷೇತ್ರದ ಟಿಕೆಟ್ ನೀಡುವ ತೀರ್ಮಾನ: ಲಕ್ಷ್ಮಣ್ ಸವದಿ ಸೇರ್ಪಡೆ ಆಗಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಿದೆ. ಲಕ್ಷ್ಮಣ್ ಸವದಿ ಹಿರಿಯ ನಾಯಕರು. ಉಪಮುಖ್ಯಮಂತ್ರಿ ಆಗಿದ್ದವರು. ಇಂದು ನಮ್ಮ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರಿಗೆ ಅಥಣಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ರು.
ಮಾಜಿ ಡಿಸಿಎಂ ಸವದಿ ಅವರು ಯಾವುದೇ ಷರತ್ತು ಹಾಕಿಲ್ಲ. ಆದರೆ ನನ್ನನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅಥಣಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ ಎಂದರು.
ಇದನ್ನೂಓದಿ:ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬೆಂಬಲಿಗರ ಅಭಿಪ್ರಾಯ ಸಂಗ್ರಹ ಸಭೆ