ಕಾರವಾರ (ಉತ್ತರ ಕನ್ನಡ) : ಒಂದೆಡೆ, ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ಪರಿಹಾರ ನೀಡಿ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಲೇ ಇದೆ. ಇನ್ನೊಂದೆಡೆ, ಸ್ಥಳಾಂತರ ಮಾಡಿದ ಮನೆಯಲ್ಲಿ ಬೆಳೆದ ತೋಟಗಾರಿಕಾ ಬೆಳೆಗಳನ್ನು ಅರಣ್ಯ ಇಲಾಖೆಯವರೇ ನಾಶ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಜೋಯಿಡಾದ ಕಾಳಿ ಹುಲಿ ಸಂರಕ್ಷಿತರ ಪ್ರದೇಶದಲ್ಲಿ ನೂರಾರು ಕುಟುಂಬಗಳು ನೆಲೆಸಿದ್ದು, ಹಲವು ವರ್ಷಗಳಿಂದ ಜನರನ್ನು ಸ್ಥಳಾಂತರ ಮಾಡುವ ವಿಚಾರದಲ್ಲಿ ಸರ್ಕಾರ ಹಾಗೂ ಜನರ ನಡುವೆ ಜಟಾಪಟಿ ನಡೆಯುತ್ತಿದೆ. ನಮ್ಮ ಮೂಲ ನೆಲೆಯನ್ನು ತಾವು ಯಾವುದೇ ಕಾರಣಕ್ಕೂ ಬಿಟ್ಟು ಕೊಟ್ಟು ಹೋಗುವುದಿಲ್ಲ ಎಂದು ಸ್ಥಳೀಯರು ಹಲವು ಬಾರಿ ಪ್ರತಿಭಟನೆ ಮಾಡಿದ್ದು, ಇನ್ನು ಕೆಲವರು ಸರ್ಕಾರ ಕೊಡುವ 15 ಲಕ್ಷ ರೂ ಪರಿಹಾರವನ್ನು ಪಡೆದು ಮನೆ ಖಾಲಿ ಮಾಡಿ ಹೋಗಿದ್ದಾರೆ.
ಇದೀಗ ಖಾಲಿ ಮಾಡಿ ಹೋಗಿರುವ ಮನೆಗಳಲ್ಲಿ ನಿರ್ಮಿಸಿದ್ದ ತೋಟಗಳನ್ನು ನಾಶ ಮಾಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ಮರಗಳನ್ನು ಸಂರಕ್ಷಣೆ ಮಾಡಬೇಕಿದ್ದ ಇಲಾಖೆ ಸಿಬ್ಬಂದಿಯೇ ಮರಗಳನ್ನು ತೆರವು ಮಾಡಹೊರಟಿದ್ದಾರೆ. ಅಡಕೆ ಗಿಡವಾಗಲಿ ಇಲ್ಲವೇ ಕಾಡಿನ ಗಿಡಗಳಾಗಲಿ ಎಲ್ಲವೂ ಗಿಡಗಳೇ. ಆದರೆ ಇಂತಹ ಗಿಡಗಳನ್ನು ನಾಶ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ಥಳೀಯರಾದ ಮಹೇಶ್ ಮಾತನಾಡಿ, "ಬುಡಕಟ್ಟು ಜನಾಂಗದವರು ನಿರ್ಮಿಸಿಕೊಂಡಿದ್ದ ಸುಮಾರು 6 ಎಕರೆ ಅಡಿಕೆ ತೋಟ, ತೆಂಗು, ಬಾಳೆ, ಮಾವು, ಹಲಸು ಮರಗಳನ್ನು ಸಂಪೂರ್ಣವಾಗಿ ಬುಡಸಮೇತ ಕಡಿದು ಹಾಕಿದ್ದಾರೆ. 50 ಕ್ವಿಂಟಲ್ ಅಡಿಕೆ ಬೆಳೆಯುವ ಜಾಗ ಇದಾಗಿದ್ದು, ಮರಗಳನ್ನು ಕಡಿಯಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಆದರೆ ಇಲಾಖೆ ಸಿಬ್ಬಂದಿ ಏಕಾಏಕಿ ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಹೀಗಾಗಿ ರೈತರ ಬೆಂಬಲಕ್ಕೆ ಸಂಘ ಸಂಸ್ಥೆಗಳು ಹಾಗು ಅಧಿಕಾರಿಗಳು ನಿಲ್ಲಬೇಕು" ಎಂದು ಮನವಿ ಮಾಡಿದರು.
ಮತ್ತೊಬ್ಬ ಸ್ಥಳೀಯ ದಿನೇಶ್ ಮಾತನಾಡಿ, "15 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಮರಗಳನ್ನು ಕಡಿಯದೆ ಬಿಟ್ಟಿದ್ದರೆ, ಮುಂದೆ ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತಿತ್ತು. ಕಾಡಿನಲ್ಲಿ ಸುಮಾರು ವರ್ಷಗಳಿಂದ ಇದ್ದು, ಇಲ್ಲಿಯವರೆಗೆ ಒಂದು ಗಿಡವನ್ನೂ ಅರಣ್ಯ ಇಲಾಖೆ ನೆಟ್ಟಿಲ್ಲ. ನಾವು ಮರಗಳನ್ನು ಬೆಳೆಸಿದ್ದೇವೆ" ಎಂದು ನೋವು ತೋಡಿಕೊಂಡಿರು.
ಶಾಸಕರ ಪ್ರತಿಕ್ರಿಯೆ : "ನನಗೆ ಮಾಹಿತಿ ಬಂದ ಮೇಲೆ ನಾನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ತೋಟ ಕಡೆಯುತ್ತಿದ್ದೀರಾ ಎಂದು ಕೇಳಿದೆ. ಅದಕ್ಕೆ ಹೌದು, ನಾವು ಪರಿಹಾರ ಕೊಟ್ಟು ಆ ಜಾಗವನ್ನು ತೆಗೆದುಕೊಂಡಿದ್ದೇವೆ ಎಂದರು. ತೋಟಗಳನ್ನು ಬೆಳೆಸಲು ಎಷ್ಟು ಶ್ರಮ ಬೇಕು. ಹಾಗೇ ಬಿಟ್ಟರೆ ಅರಣ್ಯ ಪ್ರಾಣಿಗಳಿಗಾದರೂ ಆಹಾರ ಸಿಗುತ್ತದೆ. ಅದನ್ನು ಬಿಟ್ಟು ಮರಗಳನ್ನೇ ಕಡಿಯುವ ಕ್ರಮ ಒಳ್ಳೆಯದಲ್ಲ. ಇಲ್ಲಿನ ನಿವಾಸಿಗಳಿಗೆ ಇಲಾಖೆಯಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಈ ರೀತಿ ಅಡಿಕೆ ಹಾಗೂ ತೆಂಗಿನ ಮರಗಳನ್ನು ಕಡಿಯುವುದು ತಪ್ಪು" ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಇದನ್ನೂ ಓದಿ : ದಾವಣಗೆರೆ: 750ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದುಹಾಕಿ ಕಿಡಿಗೇಡಿಗಳ ಅಟ್ಟಹಾಸ!