ಕಾರವಾರ: ಕಟ್ಟುನಿಟ್ಟನ ಕೊರೊನಾ ಕರ್ಪ್ಯೂ ನಡುವೆಯೂ ಅನಗತ್ಯವಾಗಿ ಓಡಾಡುತ್ತಿದ್ದ ನೂರಾರು ಮಂದಿಯನ್ನು ವಶಕ್ಕೆ ಪಡೆದ ಹೊನ್ನಾವರ ಪೊಲೀಸರು, ದಂಡದ ಬದಲಿಗೆ ಕೊರೊನಾ ನಿಯಮ ಪಾಲನೆಯ ಪಾಠ ಮಾಡಿ ಕೊನೆಯ ಎಚ್ಚರಿಕೆಯ ಸರ್ಪೈಸ್ ನೀಡಿ ಕಳುಹಿಸಿದ್ದಾರೆ.
ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆದರೆ ಈ ವೇಳೆ ಹೊರತಾಗಿಯೂ ನಾನಾ ಕಾರಣಗಳನ್ನು ಹೇಳಿಕೊಂಡು ಅನಗತ್ಯವಾಗಿ ತಿರುಗಾಡುತ್ತಿರುವುದನ್ನು ಗಮನಿಸಿದ ಹೊನ್ನಾವರ ಪೊಲೀಸರು, ವಾಹನಗಳನ್ನು ವಶಕ್ಕೆ ಪಡೆದಿದ್ದರು.
ಸಿಪಿಐ ಶ್ರೀಧರ ಎಸ್.ಆರ್, ಪಿಎಸ್‌ಐಗಳಾದ ಶಶಿಕುಮಾರ, ಸಾವಿತ್ರಿ ನಾಯ್ಕ ಹಾಗೂ ಸಿಬ್ಬಂದಿ ಅನಗತ್ಯವಾಗಿ ತಿರುಗಾಡುತ್ತಿದ್ದ ಸುಮಾರು 75ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ತಡೆದು ಠಾಣೆ ಬಳಿ ನಿಲ್ಲಿಸಿದ್ದರು. ದಂಡ ಕಟ್ಟಬೇಕಾಯ್ತಲ್ಲಾ ಎಂದು ಗೊಣಗುತ್ತಿದ್ದವರಿಗೆ ಪೊಲೀಸರು ದಂಡದ ಬದಲು ಕೊನೆಯ ವಾರ್ನಿಂಗ್ ಎಂದು ಸರ್ಪೈಸ್ ನೀಡಿದ್ದರು.
ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮೇ 24ರ ವರೆಗೆ ಲಾಕ್ಡೌನ್ ಮಾಡಲು ಆದೇಶಿಸಿದೆ. ಆದರೆ ತುರ್ತು ಸೇವೆ ಹೊರತಾಗಿ ಹೊರ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇದು ಎಲ್ಲರಿಗೂ ಕೊನೆಯ ವಾರ್ನಿಂಗ್. ನಾಳೆಯಿಂದ ಇದು ಪುನರಾವರ್ತನೆ ಆದಲ್ಲಿ ಅಂತಹ ವಾಹನಗಳನ್ನು ತಡೆದು ಎಫ್‌ಐಆರ್ ದಾಖಲಿಸಿ ಸೀಜ್ ಮಾಡುವುದಾಗಿ ಸಿಪಿಐ ಎಚ್ಚರಿಸಿದ್ದಾರೆ. ಕೊನೆಗೆ ವಾಹನದ ದಾಖಲಾತಿಗಳನ್ನು ಪರಿಶೀಲಿಸಿ ಬಿಟ್ಟು ಕಳುಹಿಸಿದ್ದಾರೆ.