ಭಟ್ಕಳ: ಕಳೆದ ಜೂನ್ 13ರಂದು ದುಬೈನಿಂದ ಭಟ್ಕಳಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ 184 ಜನರ ಪೈಕಿ 124 ಜನರ ಗಂಟಲು ದ್ರವದ ಪರೀಕ್ಷೆ ನೆಗೆಟಿವ್ ಬಂದಿದ್ದು, ಅವರನ್ನು ಹೋಮ್ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.
ಜೂನ್ 13ರಂದು ದುಬೈನಿಂದ ಭಟ್ಕಳಕ್ಕೆ ಬಂದಿದ್ದವರನ್ನು ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಇಲ್ಲಿನ ಎರಡು ಖಾಸಗಿ ಹೋಟೆಲ್ ಹಾಗೂ ಅಂಜುಮನ್ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್‍ಗೆ ಒಪ್ಪಿಸಿ ನಂತರ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಮೊದಲ ಹಂತದಲ್ಲಿ 100 ಮಂದಿಯ ವರದಿ ನೆಗೆಟಿವ್ ಬಂದಿತ್ತು. ಇದೀಗ 124 ಜನರ ವರದಿ ನೆಗೆಟಿವ್ ಬಂದಿದ್ದು, ಜೊತೆಗೆ 7 ದಿನದ ಸಾಂಸ್ಥಿಕ ಕ್ವಾರಂಟೈನ್ ಅವಧಿ ಸಹ ಮುಕ್ತಾಯಗೊಂಡಿದೆ.
ಶನಿವಾರದಂದು 124 ಮಂದಿಗೆ ಹೋಮ್ ಕ್ವಾರಂಟೈನ್ ಕುರಿತು ಸೂಚನೆ ನೀಡಿ ಅವರವರ ಮನೆಗೆ ಕಳುಹಿಸಲಾಗಿದೆ. ಗಂಟಲು ದ್ರವದ ಪರೀಕ್ಷೆ ವರದಿ ಬಂದ ಮೇಲೆಯೇ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನಿಡಿದ್ದಾರೆ. ಈ ಹಿನ್ನೆಲೆ ಭಟ್ಕಳಕ್ಕೆ ದುಬೈನಿಂದ ಬಂದಿದ್ದ ಇನ್ನೂ 59 ಜನರ ವರದಿಗಾಗಿ ಕಾಯಲಾಗುತ್ತಿದೆ. ವರದಿಯ ಅನುಸಾರವಾಗಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.