ಉತ್ತರ ಕನ್ನಡ : ರಾಜ್ಯದಲ್ಲಿ ಉಂಟಾದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಉನ್ನತ ಮಟ್ಟದ ಪ್ರಾಧಿಕಾರ ರಚಿಸಬೇಕು ಎಂದು ಕೆಪಿಸಿಸಿ ಪ್ರವಾಹ ಪರಿಸ್ಥಿತಿ ಅಧ್ಯಯನ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದರು.
ಉತ್ತರ ಕನ್ನಡದ ಶಿರಸಿಯಲ್ಲಿ ಮಾತನಾಡಿ, ಕೇಂದ್ರ ನಾಯಕರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳು ಅಗತ್ಯ ಬಿದ್ದಲ್ಲಿ ಎಲ್ಲಾ ಪಕ್ಷಗಳ ಸಹಯೋಗ ತೆಗೆದುಕೊಂಡು ಹೋಗಿ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಅದರ ಪ್ರಯೋಜನವನ್ನು ಪಡೆದುಕೊಂಡು ಜನರ ಬದುಕನ್ನು ಕಟ್ಟಿಕೊಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಕಂಡು ಕೇಳರಿಯದ ಜಲಪ್ರವಾಹ ಇದಾಗಿದೆ. ಉತ್ತರ ಕರ್ನಾಟಕದ ನದಿಗಳ ಪ್ರವಾಹದಿಂದ ಸಾವಿರಕ್ಕೂ ಅಧಿಕ ಗ್ರಾಮಗಳು ಮುಳುಗಿದೆ. ಲಕ್ಷಕ್ಕೂ ಅಧಿಕ ಮನೆಗಳು ಕುಸಿದಿದೆ. ಇಲ್ಲಿ ನಿರಾಶ್ರಿತರಾದವರು ಮಳೆ ನೀರು ಇಳಿದ ಮೇಲೆ ಎಲ್ಲಿಗೆ ಹೋಗಬೇಕು ಎಂಬುದು ಸಮಸ್ಯೆಯಾಗಿದೆ. ಮನೆ ಕಟ್ಟುವುದು ಅಲ್ಲ. ಬದುಕು ಕಟ್ಟಿಕೊಡುವ ಅನಿವಾರ್ಯತೆಯಿದೆ. ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷವನ್ನು ಜೂನ್ ತಿಂಗಳಿಂದ ಮಾರ್ಚ್ ವರೆಗೆ ಇರುವುದನ್ನು ಸೆಪ್ಟೆಂಬರ್ ನಿಂದ ಮೇ ವರೆಗೆ ಮಾಡಬೇಕು ಎಂದು ಒತ್ತಾಯಿಸಿದರು.