ಶಿರಸಿ: ನೂರಾರು ವರ್ಷಗಳಿಂದ ಜೀವನ ಸಾಗಿಸಿಕೊಂಡು ಬಂದಿರುವ ಜಾಗವನ್ನು ಮಳೆರಾಯನ ಭೀತಿಯಿಂದ ಬಿಡಬೇಕಾದ ದುಸ್ಥಿತಿ ತಾಲೂಕಿನ ಜಾಜಿಗುಡ್ಡೆ ನಿವಾಸಿಗಳಿಗೆ ಎದುರಾಗಿದೆ. ಗುಡ್ಡ ಕುಸಿಯುವ ಭೀತಿಯಿಂದ ತಾಲೂಕಾಡಳಿತ ಪರ್ಯಾಯ ವ್ಯವಸ್ಥೆ ಮಾಡದೇ ಮನೆ ಬಿಡಲು ಸೂಚಿಸಿದೆ.
ಕಳೆದ ವರ್ಷ ಸುರಿದ ಭೀಕರ ಮಳೆಯಿಂದ ದೊಡ್ಡ ಗುಡ್ಡ ಕುಸಿದು ವಾಸ್ತವ್ಯದ ಸಮಸ್ಯೆ ಅನುಭವಿಸಿದ್ದ, ತಾಲೂಕಿನ ಬಾಳೆಕಾಯಿಮನೆ ಗ್ರಾಮದ ಜಾಜಿಗುಡ್ಡೆ ಹಾಗು ತಳಗೇರಿ ಮಜರೆಗಳ ನಿವಾಸಿಗಳಿಗೆ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ವಾಸ್ತವ್ಯ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಆದರೆ ಮಳೆಗಾಲದ ಮಧ್ಯೆ ದಿಡೀರ್ ಆಗಿ ಹೀಗೆ ಸೂಚನೆ ನೀಡಿರುವುದು ಸ್ಥಳೀಯ ನಿವಾಸಿಗಳು ಅತಂತ್ರ ಪರಿಸ್ಥಿತಿಗೆ ದೂಡಿದೆ.
ಕಳೆದ ವರ್ಷ ಮಳೆಗಾಲದ ಅಬ್ಬರದಿಂದಾಗಿ ಜಾಜಿಗುಡ್ಡೆಯ ಒಂದಷ್ಟು ಭಾಗದ ಗುಡ್ಡ ಕುಸಿದು ನಷ್ಟಕ್ಕೆ ಕಾರಣವಾಗಿತ್ತು. ಅಂಚಿನ ಮನೆಗಳಿಗೆ ರಾಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಗುಡ್ಡದ ಇನ್ನೊಂದಷ್ಟು ಭಾಗ ಬಿರುಕು ಬಿಟ್ಟು ಹಾಗೇಯೇ ನಿಂತಿತ್ತು. ಈ ಗುಡ್ಡ ಕುಸಿತ ಪ್ರದೇಶದಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಿಂದ ಸಮೀಕ್ಷೆ ನಡೆಸಲಾಗಿತ್ತು. ಇಲ್ಲಿ ಗುಡ್ಡ ಕುಸಿತದಂತಹ ಅವಘಡ ಸಂಭವಿಸುವ ಸಾಧ್ಯತೆ ಇರುವುದಾಗಿ ಈ ಇಲಾಖೆಯ ವರದಿ ಉಲ್ಲೇಖಿಸಿ ಇದೀಗ ಹುಲೇಕಲ್ ಉಪ ತಹಶೀಲ್ದಾರ್ರು ಮುಂಜಾಗ್ರತೆಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ ದಿಢೀರ್ ಆಗಿ ಸೂಚನೆ ನೀಡಿದ್ದರಿಂದ ಈಗ ಎಲ್ಲಿಗೆ ಹೋಗುವುದು ? ಎಂಬ ಚಿಂತೆ ಇಲ್ಲಿನ ನಿವಾಸಿಗಳಿಗೆ ಎದುರಾಗಿದೆ.
ಇಕ್ಕಟ್ಟಿನ ಸ್ಥಿತಿ: ಗುಡ್ಡ ಕುಸಿತದ ಘಟನೆಯಾಗಿ ವರ್ಷವೇ ಕಳೆದಿದೆ. ಆದರೆ ಈಗ ಮಳೆಗಾಲ ಬಂದ ನಂತರ ಸ್ಥಳಾಂತರಕ್ಕೆ ತಿಳಿಸಿರುವುದು ನಿವಾಸಿಗಳಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಇಲ್ಲಿನ ಏಳು ಕುಟುಂಬಗಳಿಗೆ ಸ್ಥಳಾಂತರದ ಸೂಚನೆ ನೀಡಲಾಗಿದೆ. ಇದರಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಳ್ಳಬೇಕಾಗುತ್ತದೆ. ಹತ್ತಾರು ಜಾನುವಾರುಗಳಿವೆ. ಅವುಗಳನ್ನು ಎಲ್ಲಿಗೆ ಕರೆದೊಯ್ಯುವುದು ? ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆಯೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಮನೆ ಕಟ್ಟಿಕೊಳ್ಳಲು ಸರಿಯಾದ ಜಾಗ ನೀಡಿ: ನಮಗೆ ಮನೆ ಕಟ್ಟಿಕೊಳ್ಳಲು ಮಾಲ್ಕಿ ಜಾಗದಲ್ಲಿ ಸ್ಥಳಾವಕಾಶವಿಲ್ಲ. ಎಲ್ಲವೂ ಗುಡ್ಡ ಪ್ರದೇಶವಾಗಿದೆ. ಅಲ್ಲಿ ಮನೆ ಕಟ್ಟಿಕೊಂಡರೂ ನೀರಿನ ಲಭ್ಯತೆ ಕಷ್ಟವಾಗುತ್ತದೆ. ಹೀಗಾಗಿ ಅರಣ್ಯ ಇಲಾಖೆಯ ಸಮತಟ್ಟಾದ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ಹಿಂದೆಯೇ ಮನವಿ ಮಾಡಿದ್ದೆವು. ಈಗಲಾದರೂ ಅದಕ್ಕೆ ಸ್ಪಂದಿಸಬೇಕು ಎಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.