ಕಾರವಾರ: ಸಂವಿಧಾನವನ್ನು ಬದಲಿಸುವುದಾಗಿ ಹೇಳುವ ಮತ್ತು ದಲಿತರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವ ಅನಂತಕುಮಾರ್ ಹೆಗಡೆ ವಿರುದ್ಧ ಜನ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳುವುದಾಗಿ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ದೀಪಕ್ ಕುಡಾಳಕರ್ ಹೇಳಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 23 ವರ್ಷಗಳಿಂದ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ ಕೋಮು ಸಂಘರ್ಷ ಸೃಷ್ಠಿಸುವುದರಲ್ಲಿಯೇ ಕಾಲ ಕಳೆದಿದ್ದಾರೆ. ಇಷ್ಟು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ಯಾವ ಯೋಜನೆಯನ್ನು ತಂದಿಲ್ಲ. ಆದರೆ ಇದೀಗ ತಮ್ಮ ಸಾಧನೆ ಮೂಲಕ ಮತ ಕೇಳಲಾಗದವರು ಮೋದಿ ಹೆಸರನ್ನಿಟ್ಟು ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದರಾದ ಇವರ ಬಳಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಿರುವ ಅನುದಾನದಲ್ಲಿ ಕೆಲಸ ಮಾಡಿಕೊಡುವಂತೆ ಕೇಳಿಕೊಂಡರೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಇಂತವರು ಸಂಸದರಾಗಿ ಪ್ರಯೋಜನವಿಲ್ಲ. ಅಲ್ಲದೆ ದಲಿತರ ಮತಗಳು ತಮಗೆ ಬೇಡ, ನಾಯಿಗಳು ಎಂದು ಕೀಳು ಮಟ್ಟದಲ್ಲಿ ಮಾತನಾಡುತ್ತಾರೆ.
ಇಂತವರಿಗೆ ನಾವೇಕೆ ಮತ ಹಾಕಬೇಕು. ಇದನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮತಗಳಿದ್ದು, ಈ ಬಗ್ಗೆ ಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸಿ ಬಿಜೆಪಿ ವಿರುದ್ಧ ಪ್ರಚಾರ ಮಾಡುವುದಾಗಿ ಹೇಳಿದರು.